ಹೂಡಿಕೆಗೆ ಬಹುತೇಕರ ಮೊದಲ ಆಯ್ಕೆ ಸ್ಥಿರ ಠೇವಣಿ (ಎಫ್ಡಿ). ಇದು ಉತ್ತಮ ಹೂಡಿಕೆಗೆ ಒಂದು ಆಯ್ಕೆಯಾಗಿದೆ. ಯಾವುದೇ ಅಪಾಯವಿಲ್ಲದೆ ಬಡ್ಡಿಯನ್ನು ಪಡೆಯಬಹುದು. ಇದ್ರ ಮೇಲೆ ಹೂಡಿಕೆ ಮಾಡುವ ಪ್ಲಾನ್ ನಲ್ಲಿದ್ದರೆ ಅಥವಾ ಹೂಡಿಕೆ ಮೇಲೆ ಬಡ್ಡಿ ಪಡೆಯುತ್ತಿದ್ದರೆ ತೆರಿಗೆ ನೀತಿಯನ್ನು ತಿಳಿದಿರಬೇಕಾಗುತ್ತದೆ. ಇಲ್ಲವಾದ್ರೆ ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್ ಬರುವ ಸಾಧ್ಯತೆಯಿದೆ.
ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಅಥವಾ ಕೆಲಸ ಮಾಡದ ಸಂಗಾತಿ ಹೆಸರಿನಲ್ಲಿ ಎಫ್ಡಿ ಹೂಡಿಕೆ ಮಾಡಿದ್ರೆ ತೆರಿಗೆ ಕಟ್ಟಬೇಕಾಗಿಲ್ಲ ಎಂದು ಅನೇಕರು ನಂಬಿದ್ದಾರೆ. ಆದ್ರೆ ಇದು ತಪ್ಪು. ಯಾರದೇ ಹೆಸರಿನಲ್ಲಿ ಎಫ್ಡಿ ಹೂಡಿಕೆ ಮಾಡಿ ಬಡ್ಡಿ ಪಡೆಯುತ್ತಿದ್ದರೆ ಅದನ್ನು ಆದಾಯವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ನೀವು ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಆದಾಯ ತೆರಿಗೆ ಫಾರ್ಮ್ ಭರ್ತಿ ಮಾಡುವಾಗ ಎಫ್ಡಿಯಿಂದ ಪಡೆದ ಬಡ್ಡಿ ಮತ್ತು ಬ್ಯಾಂಕ್ ಉಳಿತಾಯದಿಂದ ಬರುವ ಆದಾಯದ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಎಫ್ಡಿಯಿಂದ ಪಡೆದ ಬಡ್ಡಿಗೆ ಸಂಪೂರ್ಣ ತೆರಿಗೆ ವಿಧಿಸಲಾಗುತ್ತದೆ. ಈ ಬಡ್ಡಿ ಆದಾಯವನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಬೇಕು.
ಆದಾಯ ತೆರಿಗೆ ರಿಟರ್ನ್ ಭರ್ತಿ ಮಾಡುವಾಗ, ಎಫ್ಡಿಯಿಂದ ಬರುವ ಆದಾಯದ ಕಾಲಮ್ ಭರ್ತಿ ಮಾಡಬೇಕು. ಖಾತೆಗೆ ಬಡ್ಡಿ ಜಮಾ ಆದಾಗ ಮಾತ್ರ ಅದ್ರ ಮೇಲಿನ ತೆರಿಗೆಯನ್ನು ಬ್ಯಾಂಕ್ ಕಡಿತಗೊಳಿಸುತ್ತದೆ. ಒಂದು ವೇಳೆ ನೀವು ಬಡ್ಡಿಯ ಬಗ್ಗೆ ವಿವರ ನೀಡದೆ ಹೋದಲ್ಲಿ 26ಎಎಸ್ ಸ್ಟೇಟ್ಮೆಂಟ್ ನಲ್ಲಿ ಇದ್ರ ಮಾಹಿತಿ ಇರುತ್ತದೆ. ಆಗ ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್ ಬರಲಿದೆ.