ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ವಿಮಾನ ನಿಲ್ದಾಣಗಳಲ್ಲಿನ ಕೋವಿಡ್ -19 ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೇಳಿದೆ. ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಡಿಜಿಸಿಎ ಸೂಚನೆ ನೀಡಿದೆ.
ಪ್ರಯಾಣಿಕರು ಸರಿಯಾಗಿ ಮಾಸ್ಕ್ ಧರಿಸಿರುವುದು ವಿಮಾನ ನಿಲ್ದಾಣ ನಿರ್ವಾಹಕರು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ವಿಮಾನ ನಿಲ್ದಾಣದ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್ -19 ಮಾರ್ಗಸೂಚಿಗಳ ಪ್ರಕಾರ ಮಾಸ್ಕ್ ಸರಿಯಾಗಿ ಧರಿಸದ ಮತ್ತು ಸಾಮಾಜಿಕ ಅಂತರವನ್ನು ಕಾಪಾಡದ ಪ್ರಯಾಣಿಕರಿಗೆ ಪೊಲೀಸ್ ಸಹಾಯ ಪಡೆದು ಸ್ಥಳದಲ್ಲಿಯೇ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆಸಿ ಎಂದು ಡಿಜಿಸಿಎ ಸೂಚನೆ ನೀಡಿದೆ.
ವಿಮಾನದಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಲಾಗ್ತಿದೆಯಾ ಎಂಬುದನ್ನು ಪರಿಶೀಲನೆ ನಡೆಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸೂಚಿಸಿದೆ. ಅಚಾನಕ್ ಪರಿಶೀಲನೆ ನಡೆಸಿದಾಗ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಎಷ್ಟರ ಮಟ್ಟಿಗೆ ನಿಯಮ ಪಾಲನೆ ಮಾಡ್ತಿದ್ದಾರೆಂಬುದು ಗೊತ್ತಾಗಲಿದೆ. ಒಂದು ವೇಳೆ ವಿಮಾನದೊಳಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸದೆ ಹೋದಲ್ಲಿ ವಿಮಾನ ಸಂಸ್ಥೆಗೂ ದಂಡ ವಿಧಿಸಬೇಕೆಂದು ಡಿಜಿಸಿಎ ಸೂಚಿಸಿದೆ. ಪದೇ ಪದೇ ನಿಯಮ ಮೀರುವ ಪ್ರಯಾಣಿಕನ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆದೇಶ ನೀಡಲಾಗಿದೆ.