ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಕೋರ್ಟ್ ಗೆ ಹಾಜರಾಗಿ ಹೇಳಿಕೆ ದಾಖಲಿಸಲು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಅನುಮತಿ ನೀಡಿದೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪರ ವಕೀಲ ಜಗದೀಶ್ ಯುವತಿಗೆ ಎಸ್ಐಟಿ ಮೇಲೆ ಹಾಗೂ ಪೊಲೀಸರ ಮೇಲೆ ಯಾವುದೇ ನಂಬಿಕೆ ಇಲ್ಲ ಹಾಗಾಗಿ ಕೋರ್ಟ್ ಮುಂದೆ ಹಾಜರಾಗಿ ನ್ಯಯಾಧೀಶರ ಎದುರು ಹೇಳಿಕೆ ದಾಖಲಿಸುವುದಾಗಿ ಹೇಳಿದ್ದು, ಅನುಮತಿ ನೀಡುವಂತೆ ಮನವಿ ಮಾಡಿದರು.
ಸಿಡಿ ಲೇಡಿ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಲಯದಿಂದ ಗ್ರೀನ್ ಸಿಗ್ನಲ್
ವಕೀಲರ ಮನವಿ ಆಲಿಸಿದ ನ್ಯಾಯಾಧೀಶರು ಯುವತಿ ಕೋರ್ಟ್ ಗೆ ಹಾಜರಾಗಿ ಹೇಳಿಕೆ ದಾಖಲಿಸಲು ಅನುಮತಿ ನೀಡಿದರು. ಮೊದಲು ಸಿ ಆರ್ ಪಿ ಸಿ ಸೆಕ್ಷನ್ 164ರ ಅಡಿ ಯುವತಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತೇವೆ. ಬಳಿಕ ಯುವತಿಯನ್ನು ತನಿಖಾಧಿಕಾರಿಗೆ ಒಪ್ಪಿಸಲಾಗುವುದು. ಬಳಿಕ ತನಿಖಾಧಿಕಾರಿ ಮುಂದೆ ಯುವತಿ ಹೇಳಿಕೆ ನೀಡಲಿ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಯುವತಿ ನ್ಯಾಯಾಲಯದಲ್ಲಿ ದಾಖಲಿಸುವ ಹೇಳಿಕೆಯನ್ನೂ ಗೌಪ್ಯವಾಗಿ ಇಡಲಾಗುವುದು. ಅಲ್ಲದೇ ಯುವತಿ ಮಾಡಿದ ಮನವಿಯಂತೆ ಯುವತಿಗೆ ರಕ್ಷಣೆ ನೀಡಲು ಎಸ್ ಐ ಟಿ ಸಿದ್ಧವಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ಯಾವುದೇ ಕ್ಷಣದಲ್ಲಿ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಇದೆ.