ಬೆಂಗಳೂರು: ಲಾಕ್ಡೌನ್ ಬಗ್ಗೆ ಯಾರೂ ಹೇಳಿಕೆ ಕೊಡಬೇಡಿ. ನೈಟ್ ಕರ್ಫ್ಯೂ ಬಗ್ಗೆಯೂ ಹೇಳಿಕೆ ಕೊಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಮಾದರಿಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಆದೇಶಗಳನ್ನು ಮುಖ್ಯಕಾರ್ಯದರ್ಶಿಗಳ ಸಹಿಯಲ್ಲಿ ಹೊರಡಿಸಲಾಗುತ್ತದೆ. ಕೋವಿಡ್-19 ಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನದಲ್ಲಿ ಏಕರೂಪತೆ ಮತ್ತು ದೃಢತೆಯನ್ನು ತರಲು ಭಾರತ ಸರ್ಕಾರದ ವಿಧಾನವನ್ನೇ ರಾಜ್ಯ ಸರ್ಕಾರವನ್ನು ಅನುಸರಿಸಲು ಕ್ರಮಕೈಗೊಳ್ಳಲಾಗಿದೆ.
ಕೋವಿಡ್ 19 ಕ್ಕೆ ಸಂಬಂಧಿಸಿದ ಕಂಟೇನ್ಮೆಂಟ್, ಜನರ ಮತ್ತು ವಾಹನಗಳ ಸಂಚಾರ, ಗುಂಪುಗಾರಿಕೆಗೆ ನಿರ್ಬಂಧ ಹೇರುವುದು, ಅನುಮತಿ ನೀಡಿದ ಮತ್ತು ನೀಡಲಾಗದ ಚಟುವಟಿಕೆಗಳು ಮತ್ತು ಸಂಬಂಧಿತ ಮಾಹಿತಿಗಳನ್ನು ಯಾವುದೇ ಸೂಚನೆ ಮತ್ತು ನಿರ್ದೇಶನವನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಶಾಖೆಯಿಂದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಮುಖ್ಯಕಾರ್ಯದರ್ಶಿ ಸಹಿಯಲ್ಲಿ ಮಾತ್ರ ಹೊರಡಿಸಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ.
ಹೊರಡಿಸುವ ಎಲ್ಲಾ ಆದೇಶಗಳನ್ನು ಮುಖ್ಯಮಂತ್ರಿಯವರ ಅನುಮೋದನೆ ಪಡೆದ ನಂತರವೇ ಹೊರಡಿಸತಕ್ಕದ್ದು. ಯಾವುದೇ ಸಚಿವರಾಗಲಿ, ಅಧಿಕಾರಿಗಳಾಗಲಿ ಹೇಳಿಕೆ ನೀಡಬಾರದೆಂದು ಸಿಎಂ ತಾಕೀತು ಮಾಡಿದ್ದಾರೆ.