ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶ್ಮುಖ್, ನೂರು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ವಿಚಾರ ಈಗ ಆಡಳಿತರೂಢ ಶಿವಸೇನೆಯ ಹಾಗೂ ಎನ್.ಸಿ.ಪಿ. ನಾಯಕರ ಜಟಾಪಟಿಗೆ ಕಾರಣವಾಗಿದೆ. ಅನಿಲ್ ದೇಶ್ಮುಖ್ ವಿರುದ್ಧ ಶಿವಸೇನೆ ಪರೋಕ್ಷ ವಾಗ್ದಾಳಿ ನಡೆಸುತ್ತಿರುವುದು ಎನ್.ಸಿ.ಪಿ. ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅದರಲ್ಲೂ ದೇಶದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕಗಳಿದ್ದ ಕಾರನ್ನು ನಿಲ್ಲಿಸಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೆರವಾಗಿದ್ದರು ಎಂಬ ಅಂಶ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಮುಜುಗರಕ್ಕೀಡು ಮಾಡಿದೆ. ಈ ವಿಚಾರ ಈಗ ಪ್ರತಿಪಕ್ಷ ಬಿಜೆಪಿಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದ್ದು, ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ.
ವಾಯುಪಡೆಗೆ ಇನ್ನೂ 10 ರಫೇಲ್ ಸೇರ್ಪಡೆ: ಮತ್ತಷ್ಟು ಹೆಚ್ಚಲಿದೆ ವಾಯುಪಡೆ ಸಮರ ಶಕ್ತಿ
ಇದರ ಮಧ್ಯೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಎಂಬ ಪ್ರಶ್ನೆ ಮೂಡಿದೆ. ಎನ್.ಸಿ.ಪಿ. ನಾಯಕ ಶರದ್ ಪವಾರ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದೇ ಈ ಅನುಮಾನಕ್ಕೆ ಕಾರಣ. ಒಂದೊಮ್ಮೆ ಈ ಮಾತುಕತೆ ಫಲಪ್ರದವಾದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.