ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಂಸದ ಡಿ.ಕೆ.ಸುರೇಶ್, ಸಿಡಿ ಸರ್ಕಾರದ ವಾಸ್ತವ ಡ್ರಾಮ ನಡೆಯುತ್ತಿದೆ. ತಾವು ಮಾಡಿದ ತಪ್ಪುಗಳನ್ನು ಕಾಂಗ್ರೆಸ್ ಮೇಲೆ ಎತ್ತಿಹಾಕುವ ಪ್ರಯತ್ನ ನಡೆಸಿದ್ದಾರೆ ಎಂದು ಗುಡುಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ಮಗಳ ವಯಸ್ಸಿನ ಹೆಣ್ಣುಮಗಳಿಗೆ ಆದ ಅನ್ಯಾಯ, ನೋವಿನ ಬಗ್ಗೆ ಸರ್ಕಾರವಾಗಲಿ, ಎಸ್ ಐ ಟಿಯಾಗಲಿ, ಮಾಧ್ಯಮಗಳಾಗಲಿ ಯಾರೂ ಚರ್ಚಿಸುತ್ತಲೂ ಇಲ್ಲ, ಚಿಂತಿಸುತ್ತಲೂ ಇಲ್ಲ. ಯುವತಿಯ ರಕ್ಷಣೆಗೆ ಮುಂದಾಗಬೇಕಾದ ಸರ್ಕಾರ ಇಂದು ಆರೋಪಿಯನ್ನೇ ರಕ್ಷಣೆ ಮಾಡಲು ನಿಂತಿದೆ. ಈ ಮೂಲಕ ಇಡೀ ಪ್ರಕರಣವನ್ನೇ ಮುಚ್ಚಿ ಹಾಕುವ ತಂತ್ರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಬೆಂಬಲಿಗರ ಪ್ರತಿಭಟನೆ – ಅಣಕು ಶವಯಾತ್ರೆ ಮಾಡಿ ಆಕ್ರೋಶ
ರಾಜ್ಯ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆ, ಕೊರೊನಾ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚಿಂತನೆ ಮಾಡುವುದು ಬೇಕಿಲ್ಲ. ತನ್ನ ಅಕ್ರಮ ಚಟುವಟಿಕೆಗಳನ್ನು ಮುಚ್ಚಿಕೊಂಡು ಆಡಳಿತ ನಡೆಸುವ ಅಗತ್ಯವಿದೆ. ಇದು ಸಿಡಿ ಸರ್ಕಾರದ ವಾಸ್ತವ. ಯಾರೇ ಸಾಮಾನ್ಯ ವ್ಯಕ್ತಿ ತಪ್ಪು ಮಾಡಿದರೆ ಅವರು ಇಷ್ಟೊತ್ತಿಗೆ ಜೈಲಿನಲ್ಲಿ ಇರುತ್ತಿದರು. ಆದರೆ ಇವರದೇ ಪಕ್ಷದ, ಜನಪ್ರತಿನಿಧಿ ಪ್ರಭಾವಿ ವ್ಯಕ್ತಿ ತಪ್ಪು ಮಾಡಿದರೂ ಆತನ ರಕ್ಷಣೆಗೆ ನಿಂತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದೇ ಇಲ್ಲದಾಗಿದೆ ಯಾರು ಏನೂ ಬೇಕಾದರೂ ಮಾಡಬಹುದು, ಅತ್ಯಾಚಾರವನ್ನೂ ಮಾಡಬಹುದು, ಎಲ್ಲದಕ್ಕೂ ರಕ್ಷಣೆ ಕೊಡುತ್ತೇವೆ, ಸೆಕ್ಯೂರಿಟಿಯನ್ನೂ ಕೊಡುತ್ತೇವೆ ಎಂಬ ರೀತಿಯಲ್ಲಿ ಗೃಹ ಇಲಾಖೆ ಕೂಡ ನಿಂತಿರುವುದು ಬೇಸರದ ಸಂಗತಿ.
ಗೃಹ ಸಚಿವರು ಎಸ್ ಐ ಟಿ ತನಿಖೆ ಎಂದು ಹೇಳಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬೆಳವಣಿಗೆಗಳನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಸರ್ಕಾರದ ಕಾರ್ಯವೈಖರಿ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.