ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಯುವತಿ ಪೋಷಕರು ಇಡೀ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಎಸ್ಐಟಿ ವಿಚಾರಣೆ ಬಳಿಕ ಮಾತನಾಡಿದ ಯುವತಿಯ ತಂದೆ ಮಾಜಿ ಸೈನಿಕ, ಓರ್ವ ಮಾಜಿ ಸೈನಿಕನ ಹೆಣ್ಣುಮಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂಬುದಕ್ಕೆ ನನ್ನ ಮಗಳ ಪರಿಸ್ಥಿತಿಯೇ ಒಂದು ಉದಾಹರಣೆ ಎಂದರು.
ಮಹಾನಾಯಕ ಯಾರೆಂದು ಯುವತಿ ಪೋಷಕರೇ ಬಹಿರಂಗಪಡಿಸಿದ್ದಾರೆ: ರಮೇಶ್ ಜಾರಕಿಹೊಳಿ ಹೇಳಿಕೆ
ನಾನು ಓರ್ವ ಮಾಜಿ ಸೈನಿಕ. ದೇಶ ಕಾಯುವುದು ಹೇಗೆಂದು ನನಗೆ ಗೊತ್ತಿರುವಾಗ ನನ್ನ ಮಗಳನ್ನು ಹೇಗೆ ಕಾಯಬೇಕೆಂಬುದು ನನಗೆ ಗೊತ್ತಿಲ್ಲವೇ? ಆದರೆ ಡಿ.ಕೆ. ಶಿವಕುಮಾರ್ ಅವರು ನಮ್ಮ ಮಗಳನ್ನು ಒತ್ತೆ ಇಟ್ಟುಕೊಂಡು ತಮ್ಮ ಹೊಲಸು ರಾಜಕಾರಣ ಮಾಡುತ್ತಿದ್ದಾರೆ. ನನ್ನ ಮಗಳನ್ನು ನಮಗೆ ವಾಪಸ್ ನೀಡಿ. ರಾಜಕೀಯಕ್ಕೋಸ್ಕರ ನಮ್ಮ ಮಗಳನ್ನು ಬಳಸಿಕೊಳ್ಳುತ್ತಿರುವುದು ಯಾಕೆ? ನಮ್ಮ ಮಗಳಿಗೆ ಏನೇ ಆದರೂ ಅದಕ್ಕೆ ಡಿ.ಕೆ. ಶಿವಕುಮಾರ್ ಅವರೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಯುವತಿ ಸಹೋದರ, ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಎಲ್ಲವನ್ನೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದ್ದೇವೆ. ಡಿ.ಕೆ. ಶಿವಕುಮಾರ್ ಅವರು ನಮ್ಮ ಅಕ್ಕನನ್ನು ಗೋವಾಕ್ಕೆ ಕಳುಹಿಸಿದ್ದಾರೆ. ದಯವಿಟ್ಟು ನಮ್ಮ ಅಕ್ಕನನ್ನು ಕಳುಹಿಸಿಕೊಡಿ. ಆಕೆ ಬಂದ ಬಳಿಕ ನಾವೇ ಆಕೆಯನ್ನು ರಕ್ಷಿಸಿಕೊಳ್ಳುತ್ತೇವೆ. ನಮಗೆ ಪೊಲೀಸರ ರಕ್ಷಣೆಯಿದೆ. ನಮ್ಮ ಮೇಲೆ ಯಾವುದೇ ಒತ್ತಡವೂ ಇಲ್ಲ. ಯಾರ ಒತ್ತಡಕ್ಕೆ ಮಣಿದೂ ನಾವು ಹೇಳಿಕೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.