ದೇಶದಲ್ಲಿ ಹೆಚ್ಚಾಗ್ತಿರುವ ಕೊರೊನಾ ಮಹಾಮಾರಿಯನ್ನು ಗಮನದಲ್ಲಿಟ್ಟುಕೊಂಡು ಮೋಟಾರು ವಾಹನ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ ಮತ್ತು ಪರ್ಮಿಟ್‌ನ ಮಾನ್ಯತೆಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಸಾರಿಗೆ ಸಚಿವಾಲಯ ಶುಕ್ರವಾರ ಈ ವಿಸ್ತರಣೆಯ ಘೋಷಣೆ ಮಾಡಿದೆ.
ದೇಶಾದ್ಯಂತ ಕೊರೊನಾ ತಡೆಗೆ ಅನೇಕ ಷರತ್ತುಗಳನ್ನು ವಿಧಿಸಲಾಗಿದೆ. ಲಾಕ್ ಡೌನ್ ಕಾರಣದಿಂದ ಅಥವಾ ಕೊರೊನಾ ಕಟ್ಟುನಿಟ್ಟಿನ ನಿಯಮಗಳಿಂದ ವಾಹನ ದಾಖಲೆಗಳ ಸಿಂಧುತ್ವವನ್ನು ವಿಸ್ತರಿಸಲು ಅನೇಕರಿಗೆ ಸಾಧ್ಯವಾಗಿಲ್ಲ. ಸಿಂಧುತ್ವ ಫೆಬ್ರವರಿ 1,2020ರಲ್ಲಿ ಮುಕ್ತಾಯಗೊಂಡಿದ್ದರೂ ಅದನ್ನು ಜೂನ್ 30,2021ರವರೆಗೆ ಮಾನ್ಯ ಮಾಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.
ಜೂನ್ 30ರವರೆಗೆ ದಾಖಲೆಗಳನ್ನು ನ್ಯಾಯಸಮ್ಮತವೆಂದು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಷ್ಟದ ಸಮಯದಲ್ಲಿ ಕೆಲಸ ಮಾಡುವ ನಾಗರಿಕರು, ಸಾಗಣೆದಾರರು ಮತ್ತು ಇತರ ಹಲವಾರು ಸಂಸ್ಥೆಗಳಿಗೆ ಇದ್ರಿಂದ ತೊಂದರೆಯಾಗಬಾರದು ಎಂದು ಸಚಿವಾಲಯ ಹೇಳಿದೆ. ಈ ಹಿಂದೆ ಈ ಎಲ್ಲ ದಾಖಲೆಗಳ ನವೀಕರಣಕ್ಕೆ ಮಾರ್ಚ್ 31,2021ರವರೆಗೆ ಅವಕಾಶ ನೀಡಲಾಗಿತ್ತು.
ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 1989 ಗೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವವನ್ನು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಹಿಂದೆ ಮಾರ್ಚ್ 30, 2020, ಜೂನ್ 9, 2020, ಆಗಸ್ಟ್ 24, 2020 ಮತ್ತು ಡಿಸೆಂಬರ್ 27, 2020 ಸೇರಿದಂತೆ ನಾಲ್ಕು ಬಾರಿ ವಿಸ್ತರಿಸಿತ್ತು.