ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಡಿ ಲೇಡಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ, ಯುವತಿಯಿಂದ ಯಾವುದೇ ರೀತಿಯ ವಿಡಿಯೋ ಸಿಡಿ ಬಂದಿಲ್ಲ ಎಂದು ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿರುವ ಎಸ್ಐಟಿ ಮುಖ್ಯಸ್ಥರು, ವಿಡಿಯೋದಲ್ಲಿ ಯುವತಿ ಹೇಳುತ್ತಿರುವುದು ಸುಳ್ಳು. ಯಾವುದೇ ವಿಡಿಯೋ ನಮಗೆ ಬಂದಿಲ್ಲ. ಮಾಧ್ಯಮದಲ್ಲಿ ವಿಡಿಯೋ ಬಿಡುಗಡೆಯಾದ ಬಳಿಕವೇ ನಮಗೆ ವಿಷಯ ಗೊತ್ತಾಗಿರುವುದು ಎಂದು ಹೇಳಿದ್ದಾರೆ.
ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಸಿಡಿ ಲೇಡಿ
ಅಲ್ಲದೇ ಯುವತಿಗೆ ರಕ್ಷಣೆ ನೀಡುವುದಾಗಿಯೂ ಹೇಳಿದ್ದೇವೆ. ಆಕೆ ಇರುವ ಜಾಗಕ್ಕೇ ಬಂದು ಹೇಳಿಕೆಗಳನ್ನು ಪಡೆಯುವುದಾಗಿಯೂ ತಿಳಿಸಿದ್ದೇವೆ. ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ 5 ಬಾರಿ ಯುವತಿಗೆ ನೋಟೀಸ್ ನೀಡಿದ್ದೇವೆ. ಆದರೆ ಯುವತಿ ತಾನಿರುವ ಜಾಗದ ಬಗ್ಗೆ ಸುಳಿವು ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದ ಯುವತಿ, ಮಾರ್ಚ್ 12ರಂದು ತಾನು ಕಮೀಷನರ್ ಗೆ ಒಂದು ವಿಡಿಯೋ ಕಳುಹಿಸಿದ್ದೆ. ಅಂದು ಅವರು ದೂರು ದಾಖಲಿಸಿಕೊಂಡಿಲ್ಲ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ದೂರು ನೀಡಿದ ಬಳಿಕ ಅರ್ಧಗಂಟೆಯಲ್ಲಿ ವಿಡಿಯೋ ಬಿಡುಗಡೆಯಾಗಿದೆ. ನನ್ನ ತಂದೆ-ತಾಯಿಗೆ ರಕ್ಷಣೆ ನೀಡಿ. ರಕ್ಷಣೆ ನೀಡಿರುವುದು ಗೊತ್ತಾಗುತ್ತಿದ್ದಂತೆಯೇ ನಾನೇ ಎಸ್ಐಟಿ ಮುಂದೆ ಬಂದು ಎಲ್ಲಾ ಹೇಳಿಕೆಗಳನ್ನು ದಾಖಲಿಸುತ್ತೇನೆ ಎಂದು ತಿಳಿಸಿದ್ದಾಳೆ.