ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 15 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಅತ್ಯಾಚಾರ ಪ್ರಕರಣದ ರೂವಾರಿ ಎಂದು ಹೇಳಲಾಗಿದ್ದ ಬಾಲಕಿಯ ಚಿಕ್ಕಮ್ಮನೇ ಸ್ವಂತ ತಾಯಿ ಎನ್ನುವುದು ಗೊತ್ತಾಗಿದೆ. ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 30 ರಂದು ಪ್ರಕರಣ ದಾಖಲಾಗಿದ್ದು, ಎಎಸ್ಪಿ ಶೃತಿ ನೇತೃತ್ವದ ತಂಡ ತನಿಖೆ ನಡೆಸಿದೆ. ಬಾಲಕಿಯ ತಾಯಿ ಸೇರಿದಂತೆ 32 ಜನರನ್ನು ಬಂಧಿಸಲಾಗಿದೆ. ಬಾಲಕಿಯ ತಾಯಿ ಮೃತಪಟ್ಟಿದ್ದು, ಆಕೆಯನ್ನು ಓದಿಸುವುದಾಗಿ ಕರೆದುಕೊಂಡು ಬಂದಿದ್ದ ಚಿಕ್ಕಮ್ಮನೇ ಇಂತಹ ಕೃತ್ಯವೆಸಗಿದ್ದಾಳೆ ಎಂದು ಆರೋಪಿಸಲಾಗಿತ್ತು.
ಆದರೆ ಸುದೀರ್ಘ ವಿಚಾರಣೆಯಲ್ಲಿ ಆಘಾತಕಾರಿ ಮಾಹಿತಿ ಗೊತ್ತಾಗಿದೆ. ಚಿಕ್ಕಮ್ಮ ಎಂದು ಹೇಳಿಕೊಂಡಿದ್ದ ಮಹಿಳೆಯೇ ಬಾಲಕಿಯ ತಾಯಿಯಾಗಿದ್ದಾಳೆ. ಹಣದಾಸೆಗೆ ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ. ಉತ್ತರ ಕರ್ನಾಟಕ ಮೂಲದ ಮಹಿಳೆ ಶೃಂಗೇರಿಗೆ ಬಂದು ಬೇರೆಯವನನ್ನು ಮದುವೆಯಾಗಿದ್ದಳು. ತನ್ನ ಜೊತೆಗಿದ್ದ ಮಗಳನ್ನು ಅಕ್ಕನ ಮಗಳು ಎಂದು ಹೇಳಿಕೊಂಡು ಸಾಕುತ್ತಿದ್ದಳು. ಕೆಲವು ವರ್ಷಗಳ ನಂತರ ಎರಡನೇ ಪತಿಯಿಂದಲೂ ದೂರವಾಗಿ ಶೃಂಗೇರಿಯಲ್ಲಿ ವಾಸವಾಗಿದ್ದ ಮಹಿಳೆ ತನ್ನ ಮಗಳನ್ನೇ ವೇಶ್ಯಾವೃತ್ತಿಗೆ ತಳ್ಳಿದ್ದಾಳೆ. ಬಾಲಕಿ ಮೇಲೆ ನಿರಂತರ ಅತ್ಯಾಚಾರಕ್ಕೆ ತಾಯಯೇ ಸಾಥ್ ನೀಡಿದ್ದಾಳೆ ಎನ್ನಲಾಗಿದೆ.