ನವದೆಹಲಿ: ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ನೀಡಿದ ಹೇಳಿಕೆ ಬಗ್ಗೆ ಟಿಎಂಸಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬರ್ಮುಡಾ ಧರಿಸಲಿ ಎಂದು ದಿಲೀಪ್ ಘೋಷ್ ಸಲಹೆ ನೀಡಿದ್ದಾರೆ. ದಾಳಿಯಲ್ಲಿ ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ ವೀಲ್ ಚೇರ್ ನಲ್ಲಿ ಕುಳಿತುಕೊಂಡು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಬ್ಯಾಂಡೇಜ್ ಸುತ್ತಿದ ಕಾಲು ನೋವಿನಲ್ಲೇ ಪ್ರಚಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಇದನ್ನು ಟೀಕಿಸುವ ಭರದಲ್ಲಿ ದಿಲೀಪ್ ಘೋಷ್ ವಿವಾದಿತ ಹೇಳಿಕೆ ನೀಡಿದ್ದಾರೆ. ಪುರುಲಿಯಾದಲ್ಲಿ ನಿನ್ನೆ ನಡೆದ ರ್ಯಾಲಿಯಲ್ಲಿ ಮಾತನಾಡಿದ ದಿಲೀಪ್ ಘೋಷ್ ಅವರು, ಮಮತಾ ಬ್ಯಾನರ್ಜಿ ತಮ್ಮ ಕಾಲು ಪ್ರದರ್ಶಿಸುತ್ತಿದ್ದಾರೆ. ಅವರು ಸೀರೆ ಧರಿಸಿದ್ದು ಮತ್ತೊಂದು ಕಾಲು ಕೂಡ ಕಾಣಿಸುತ್ತದೆ. ಆ ರೀತಿ ಯಾರೂ ಸೀರೆ ಧರಿಸುವುದನ್ನು ನಾನು ನೋಡಿಲ್ಲ. ಕಾಲುಗಳನ್ನು ಪ್ರದರ್ಶಿಸುವುದಾದರೆ ಸೀರೆ ಬೇಡ, ಅವರು ಬರ್ಮುಡಾ ಧರಿಸಲಿ ಎಂದು ಹೇಳಿದ್ದಾರೆ.
ಇದಕ್ಕೆ ಆಡಳಿತರೂಢ ತೃಣಮೂಲ ಕಾಂಗ್ರೆಸ್ ನಾಯಕರು, ಮಹಿಳಾ ನಾಯಕಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಂಸದರಾದ ಮೊಹುವಾ ಮೊಯಿತ್ರಾ, ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರು ಸಾರ್ವಜನಿಕ ಸಭೆಯಲ್ಲಿ ಮಮತಾ ಸೀರೆ ಏಕೆ ಧರಿಸುತ್ತಾರೆ…? ಆಕೆ ತನ್ನ ಕಾಲನ್ನು ಉತ್ತಮವಾಗಿ ಪ್ರದರ್ಶಿಸಲು ಬರ್ಮುಡಾ ಶಾರ್ಟ್ಸ್ ಧರಿಸಬೇಕೆಂದು ಹೇಳಿಕೆ ನೀಡಿದ್ದು, ಇಂತಹ ಹೇಳಿಕೆಗಳಿಂದ ಬಂಗಾಳದಲ್ಲಿ ಗೆಲ್ಲುತ್ತೇವೆ ಎಂದು ಭಾವಿಸಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಅನೇಕ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.