
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಾವೇರುತ್ತಿದ್ದಂತೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಥವಾ ಮಿಥುನ್ ಚಕ್ರವರ್ತಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಬಿಜೆಪಿ ಅಭ್ಯರ್ಥಿಗಳ ಕೊನೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಮಿಥುನ್ ಚಕ್ರವರ್ತಿ ಹೆಸರು ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಟಿಎಂಸಿ ಪಕ್ಷಕ್ಕೆ ಮತ್ತು ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಂತರದಲ್ಲಿ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಅವರು ರಾಶ್ ಬೆಹರಿ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ದಕ್ಷಿಣ ಕೊಲ್ಕತ್ತಾ ಕ್ಷೇತ್ರದಿಂದಲೂ ಮಿಥುನ್ ಚಕ್ರವರ್ತಿ ಸ್ಪರ್ಧಿಸುವುದಾಗಿ ಹೆಸರು ಕೇಳಿಬಂದಿತ್ತು. ಆದರೆ, ಮುಂಬೈನಿಂದ ಕೊಲ್ಕತ್ತಾಗೆ ಮತದಾರರ ಪಟ್ಟಿಗೆ ಹೆಸರು ವರ್ಗಾಯಿಸಿಕೊಂಡಿದ್ದ ಮಿಥುನ್ ಚಕ್ರವರ್ತಿಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ. ಚುನಾವಣೆ ನಡೆಯಬೇಕಿರುವ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಇನ್ನು ಹೆಚ್ಚಿನ ಸಮಯಾವಕಾಶ ಇದ್ದು, ಮಿಥುನ್ ಚಕ್ರವರ್ತಿ ಸ್ಪರ್ಧಿಸುವುದಾದಲ್ಲಿ ಅವರು ಬಯಸಿದ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.