ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಗೆ ತಕ್ಷಣ ರಕ್ಷಣೆ ನೀಡಬೇಕು. ಆ ಯುವತಿ ತನ್ನನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿರುವುದರಿಂದ ಅದು ರೇಪ್ ಎಂದಾಗಿರುತ್ತದೆ. ಹಾಗಾಗಿ ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಿಡಿ ಸರ್ಕಾರಕ್ಕೆ ಧಿಕ್ಕಾರ – ಸದನದಲ್ಲಿ ಸಿಡಿ ಹಿಡಿದು ಪ್ರತಿಭಟಿಸಿದ ಕಾಂಗ್ರೆಸ್
ಎಸ್ ಐ ಟಿ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಹಾಗಾಗಿ ಹೈಕೋರ್ಟ್ ಮುಖ್ಯನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಲಿ. ಬಿಜೆಪಿಯವರು ಮೇಟಿ ಪ್ರಕರಣವನ್ನು ಹೋಲಿಕೆ ಮಾಡುತ್ತಿದ್ದಾರೆ. ಇದನ್ನು ಫೇಕ್ ಸೀಡಿ ಎಂದು ಮಾಡಲು ಹೊರಟಿದ್ದಾರೆ. ರಮೇಶ್ ಪ್ರಕರಣವೇ ಬೇರೆ ಹೆಚ್. ವೈ. ಮೇಟಿ ಪ್ರಕಣವೇ ಬೇರೆ. ಮೊದಲು ರಮೇಶ್ ಜಾರಕಿಹೊಳಿ ವಿರುದ್ಧ ಎಫ್ ಐ ಆರ್ ದಾಖಲಿಸಲಿ. ತನಿಖೆಯಾಗಬೇಕಾದರೆ ಎಫ್ ಐ ಆರ್ ದಾಖಲಾಗಬೇಕಲ್ವಾ? ಎಫ್ ಐ ಆರ್ ದಾಖಲಿಸದೇ ಹೇಗೆ ತನಿಖೆ ಮಾಡ್ತಾರೆ? ನಿರ್ಭಯಾ ಕಾಯ್ದೆ ಪ್ರಕಾರ ರಮೇಶ್ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು ಎಂದರು.
ಇನ್ನು ಸದನದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತೆ. ಕೋರ್ಟ್ ಮೊರೆ ಹೋದವರು ರಾಜೀನಾಮೆ ನೀಡಲಿ. 6 ಮಂದಿ ಸಚಿವರು ರಾಜೀನಾಮೆ ನೀಡಬೇಕು. ಅಲ್ಲಿಯವರೆಗೂ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.