ಹಾಸನ- ಸಹಪಾಠಿಗಳಿಂದ ನಿಂದನೆಗೊಳಗಾದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹರ್ಷಿತ್ ಗೌಡ (16) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ದೈವಿ ಬಾಲಕ.
ಹಾಸನ ತಾಲ್ಲೂಕಿನ ಕಂಚಮಾರನಹಳ್ಳಿ ಬಳಿಯ ಖಾಸಗಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಹರ್ಷಿತ್ ಗೆ ಒಂದು ವರ್ಷದ ಹಿಂದೆ ಸ್ಟ್ರೋಕ್ ಆಗಿತ್ತು ಇದನ್ನೇ ಕಾರಣವಾಗಿಟ್ಟುಕೊಂಡ ಆತನ ಸಹಪಾಠಿಗಳು ಶಾಲೆಗೆ ಹೋದಾಗ ರೇಗಿಸುತ್ತಿದ್ದರಂತೆ. ಇದೇ ವಿಚಾರವಾಗಿ ಮಾರ್ಚ್19 ರಂದು ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಆಟೋಗೆ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ; 10 ಮಹಿಳೆಯರು ಸೇರಿ 13 ಮಂದಿ ಸಾವು
ಗಲಾಟೆ ವೇಳೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಬುದ್ದಿಮಾತು ಕೂಡ ಹೇಳಿದ್ದರು. ಇದರಿಂದ ಬೇಸರಗೊಂಡ ಹರ್ಷಿತ್ ಶಾಲೆ ಬಿಟ್ಟು ತನ್ನ ಊರಿಗೆ ಹೋಗಿದ್ದರಂತೆ. ಮನೆಗೆ ತೆರಳಿದ ನಂತರ ಮನೆ ಕೆಲಸ ಮಾಡಿಕೊಂಡಿದ್ದ ಹರ್ಷಿತ್, ದನಗಳನ್ನು ಮೇಯಿಸಲು ಹೋದಾಗ ಜಮೀನಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಘಟನೆ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇನೆ ಇರಲಿ ಸಹಪಾಠಿಗಳ ಚೇಷ್ಟೆಗೆ ಒಂದು ಮುಗ್ದ ಜೀವ ಬಲಿಯಾಗಿದ್ದು ದುರಂತವೇ ಸರಿ.