ಮೊಬೈಲ್, ಇಂಟರ್ನೆಟ್ ಬಳಕೆ ಹೆಚ್ಚಾಗ್ತಿದ್ದಂತೆ ಜನರು ಗೂಗಲ್ ಸರ್ಚ್ ಇಂಜಿನ್ ಬಳಕೆಯನ್ನೂ ಹೆಚ್ಚು ಮಾಡಿದ್ದಾರೆ. ಯಾವುದೇ ಖಾಯಿಲೆಯಿರಲಿ ಇಲ್ಲ ಊರಿನ ಹೆಸರಿರಲಿ ಪ್ರತಿಯೊಂದನ್ನೂ ಗೂಗಲ್ ನಲ್ಲಿ ಹುಡುಕಾಡುತ್ತಾರೆ. ಗೂಗಲ್ ನಲ್ಲಿ ಎಲ್ಲ ವಿಷ್ಯಗಳ ಬಗ್ಗೆ ಮಾಹಿತಿ ಸಿಗುತ್ತದೆ ನಿಜ. ಆದ್ರೆ ಸಿಕ್ಕ ಎಲ್ಲ ಮಾಹಿತಿ ಸತ್ಯವಲ್ಲ. ಕೆಲವೊಮ್ಮೆ ಗೂಗಲ್ ಮಾಹಿತಿ ಆಧರಿಸಿ ನಾವು ಮಾಡುವ ತಪ್ಪುಗಳು ನಮ್ಮ ಬ್ಯಾಂಕ್ ಖಾತೆ ಖಾಲಿಯಾಗಲು ಕಾರಣವಾಗುತ್ತದೆ. ಹಾಗಾಗಿ ಗೂಗಲ್ ನಲ್ಲಿ ಅಪ್ಪಿತಪ್ಪಿಯೂ ಕೆಲವೊಂದು ಮಾಹಿತಿಗಳನ್ನು ಹುಡುಕಬಾರದು.
ಗೂಗಲ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಎಂದಿಗೂ ಹುಡುಕಬೇಡಿ. ಹೆಚ್ಚಿನ ಜನರು ಈ ತಪ್ಪು ಮಾಡುತ್ತಾರೆ. ಗೂಗಲ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿ ಫೋನ್ ಮಾಡುತ್ತಾರೆ. ಸೈಬರ್ ಅಪರಾಧಿಗಳು ಜನರಿಗೆ ಮೋಸ ಮಾಡಲು ನಕಲಿ ಕಂಪನಿ ರಚಿಸಿ, ಸುಳ್ಳು ನಂಬರ್ ಹಾಕಿರುತ್ತಾರೆ. ನೀವು ಆ ನಂಬರ್ ಗೆ ಕರೆ ಮಾಡುತ್ತಿದ್ದಂತೆ ನಿಮ್ಮ ವೈಯಕ್ತಿಕ ಮಾಹಿತಿ ಸಂಗ್ರಹಿಸಿ, ಬ್ಯಾಂಕ್ ಲೂಟಿ ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಪ್ರವೃತ್ತಿ ಹೆಚ್ಚಿದೆ. ಹಾಗಾಗಿ ಗ್ರಾಹಕರು ಬ್ಯಾಂಕಿಂಗ್ ವೆಬ್ಸೈಟ್ ಹುಡುಕಾಟ ನಡೆಸುತ್ತಾರೆ. ಸೈಬರ್ ಅಪರಾಧಿಗಳು ಬ್ಯಾಂಕಿನ ನಕಲಿ ವೆಬ್‌ಸೈಟ್ ಮಾಡುತ್ತಾರೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಹೋಲುವ ಯು ಆರ್ ಎಲ್ ನೀಡಿರುತ್ತಾರೆ. ಇದರಿಂದ ಬಳಕೆದಾರರು ಗೊಂದಲಕ್ಕೊಳಗಾಗುತ್ತಾರೆ. ಹ್ಯಾಕರ್‌ಗಳ ಬಲೆಗೆ ಸುಲಭವಾಗಿ ಸಿಕ್ಕಿಬೀಳ್ತಾರೆ.
ಫೋನ್‌ಗೆ ಯಾವುದೇ ಅಪ್ಲಿಕೇಶನ್ ಅಥವಾ ಸಾಫ್ಟ್ ವೇರ್ ಅಗತ್ಯವಿದ್ದರೆ ಅದನ್ನು ಯಾವಾಗಲೂ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ. ಪ್ಲೇ ಸ್ಟೋರ್ ಬದಲು ಕೆಲವರು ಗೂಗಲ್ ನಿಂದ ಡೌನ್‌ಲೋಡ್ ಮಾಡುತ್ತಾರೆ. ಇದು ಅಪಾಯಕಾರಿ. ಲಿಂಕ್ ಓಪನ್ ಮಾಡ್ತಿದ್ದಂತೆ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಗೆ ಅಪಾಯಕಾರಿ ವೈರಸ್ ಪ್ರವೇಶ ಪಡೆಯುತ್ತದೆ. ಈ ವೈರಸ್ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದರ ಹೊರತಾಗಿ ಪಿಸಿ ಫೈಲ್‌ಗಳ ಮೇಲೆ ಪರಿಣಾಮ ಬೀರುತ್ತದೆ.
ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಜೀವನಶೈಲಿಗಾಗಿ ಹಣವನ್ನು ಸಂಪಾದಿಸಲು ಬಯಸುತ್ತಾನೆ. ಇದಕ್ಕಾಗಿ ಅನೇಕ ಜನರು ಗೂಗಲ್‌ನಲ್ಲಿ ಹುಡುಕುತ್ತಾರೆ. ಗೂಗಲ್ ನಲ್ಲಿ ಹುಡುಕಾಟ ನಡೆಸಿ ಎಂದಿಗೂ ಹೂಡಿಕೆ ಮಾಡಬೇಡಿ.
ಅನೇಕರು ಅನಾರೋಗ್ಯಕ್ಕೊಳಗಾದಾಗ ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಾರೆ. ಅಲ್ಲಿ ನೀಡಿರುವ ಔಷಧಿಗಳನ್ನು ಬಳಸುತ್ತಾರೆ. ಗೂಗಲ್‌ನಲ್ಲಿ ಉಲ್ಲೇಖಿಸಲಾದ ಚಿಕಿತ್ಸೆ ಮತ್ತು ಔಷಧಿಗಳು ನಿಮಗೆ ಸರಿ ಹೊಂದುತ್ತವೆ ಎನ್ನಲು ಸಾಧ್ಯವಿಲ್ಲ. ಇದ್ರಿಂದ ಆರೋಗ್ಯ ಮತ್ತಷ್ಟು ಹದಗೆಡಬಹುದು.