ನವದೆಹಲಿ: 100 ಕ್ಕೂ ಹೆಚ್ಚು ಉದ್ಯೋಗಿಗಳಿದ್ದರೆ ಕ್ಯಾಂಟೀನ್ ನಿರ್ಮಿಸಲು ಕೇಂದ್ರ ಸರ್ಕಾರ ನಿಯಮ ಜಾರಿಗೆ ತಂದಿದೆ. ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ.
ಹೊಸ ಕಾರ್ಮಿಕ ಕಾನೂನು ಪ್ರಕಾರ, ದೇಶದ ಕಂಪನಿಗಳಲ್ಲಿ 100 ಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಕ್ಯಾಂಟೀನ್ ಅಗತ್ಯವಾಗಿ ಕಲ್ಪಿಸಬೇಕಿದೆ. ಸರ್ಕಾರಿ ಯೋಜನೆಗಳನ್ನು ಜಾರಿಗೆ ತರಲು ಕಲ್ಯಾಣ ಅಧಿಕಾರಿಗಳನ್ನು ನೇಮಿಸಲು ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸಿದ್ದು ಏಪ್ರಿಲ್ 1 ರಿಂದ ದೇಶಾದ್ಯಂತ ಹೊಸ ನಿಯಮ ಜಾರಿಗೆ ಸರ್ಕಾರ ಸಿದ್ಧತೆ ಕೈಗೊಂಡಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಸಂಹಿತೆ – 2020 ರಲ್ಲಿ ವಿಶೇಷ ನಿಬಂಧನೆ ಅನ್ವಯ ಉದ್ಯೋಗಿಗಳಿಗೆ ಸೌಲಭ್ಯ ಕಲ್ಪಿಸಬೇಕಿದೆ. 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಕ್ಯಾಂಟೀನ್ ಗಳನ್ನು ಹೊಂದಿರಬೇಕು. ಒಪ್ಪಂದದ ಆಧಾರದಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಒಳಗೊಂಡಿದ್ದರೂ ಕೂಡ ಸೌಲಭ್ಯ ಕಲ್ಪಿಸಬೇಕು. ಅದೇ ಕಂಪನಿಗಳು ಕಲ್ಯಾಣ ಅಧಿಕಾರಿಗಳನ್ನು ನೇಮಿಸಬೇಕು ಎಂದು ತಿಳಿಸಲಾಗಿದೆ.
ಇದರಿಂದ ಕಾರ್ಮಿಕರು, ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಅನುಕೂಲವಾಗುತ್ತದೆ. ಕಾರ್ಮಿಕರಿಗೆ ಪ್ರಯಾಣ ಭತ್ಯೆ ನೀಡಲಾಗುವುದು. ಜೊತೆಗೆ 15 ನಿಮಿಷಕ್ಕಿಂತ ಹೆಚ್ಚಿನ ಕೆಲಸ ಮಾಡಿದರೆ ಓವರ್ ಟೈಮ್ ಎಂದು ಪರಿಗಣಿಸಿ ವೇತನ ಪಾವತಿಸಬೇಕಿದೆ. ಪ್ರತಿ 5 ಗಂಟೆಗಳಿಗೊಮ್ಮೆ ಅರ್ಧ ಗಂಟೆ ವಿರಾಮ ನೀಡುವುದು ಅಗತ್ಯವಾಗಿದ್ದು, ವಿರಾಮದ ಸಮಯವನ್ನು ಕೂಡ ಕರ್ತವ್ಯದ ಅವಧಿ ಎಂದು ಪರಿಗಣಿಸಲಾಗುವುದು.