ಮುಂಬೈ: ಭಾರತದ ಅತಿ ದೊಡ್ಡ ಸಾಫ್ಟ್ವೇರ್ ಸೇವಾಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಘೋಷಿಸಿದೆ.
ಏಪ್ರಿಲ್ 1 ರಿಂದ ಪರಿಷ್ಕೃತ ವೇತನ ಜಾರಿಗೆ ಬರಲಿದೆ. ನಮ್ಮ ಮಾನದಂಡಗಳಿಗೆ ಅನುಗುಣವಾಗಿ ಏಪ್ರಿಲ್ 2021 ರಿಂದ ವೇತನ ಹೆಚ್ಚಳ ಮಾಡಲಾಗುವುದು ಎಂದು ಟಿಸಿಎಸ್ ವಕ್ತಾರರು ಹೇಳಿದ್ದಾರೆ.
ಮುಂಬೈ ಮೂಲದ ಟಿಸಿಎಸ್ 4 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು ಎಲ್ಲಾ ಉದ್ಯೋಗಿಗಳಿಗೆ ವೇತನ ಹೆಚ್ಚಳದ ಪ್ರಯೋಜನ ಸಿಗಲಿದೆ. ಆರ್ಥಿಕ ವರ್ಷದಲ್ಲಿ ವೇತನ ಹೆಚ್ಚಳ ಘೋಷಿಸಿದ ಮೊದಲ ಐಟಿ ಸೇವೆಗಳ ಕಂಪನಿ ಟಿಸಿಎಸ್ ಆಗಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ವೇತನ ಹೆಚ್ಚಳ ಮಾಡಲಾಗಿತ್ತು. ಅದಾದ ನಂತರ ಆರು ತಿಂಗಳೊಳಗೆ ಎರಡನೇ ಬಾರಿಗೆ ವೇತನ ಹೆಚ್ಚಳ ಘೋಷಣೆ ಮಾಡಲಾಗಿದೆ. ಕೊರೋನಾ ಆರ್ಥಿಕ ಸಂಕಷ್ಟದ ನಡುವೆಯೂ ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ಟಿಸಿಎಸ್ ವೇತನ ಹೆಚ್ಚಳ ಮಾಡಿದೆ. ಶೇಕಡ 12.14 ರಷ್ಟು ಸರಾಸರಿ ವೇತನ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.