ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇಕಡ 50 ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಿ, ಶೇಕಡ 100 ರಷ್ಟು ಭರ್ತಿಗೆ ನಿರ್ಬಂಧ ಹೇರುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳಲ್ಲಿ ಶೇಕಡ 50 ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರ ವಿರುದ್ಧ ನಟರಾದ ಪುನೀತ್ ರಾಜಕುಮಾರ್, ದುನಿಯಾ ವಿಜಯ್, ಸುದೀಪ್ ಸೇರಿದಂತೆ ಹಲವರು ಆಕ್ಷೇಪಿಸಿದ್ದರು.
ಬೇರೆ ಎಲ್ಲ ಕಡೆ ಇಲ್ಲದ ನಿಯಮ ಚಿತ್ರಮಂದಿರಗಳಿಗೆ ಮಾತ್ರ ಬೇಕು ಎನ್ನುವ ಅಭಿಪ್ರಾಯ ಚಿತ್ರರಂಗದಿಂದ ಕೇಳಿಬಂದಿತ್ತು. ಇದು ಸಿಎಂ ಗಮನಕ್ಕೆ ಬಂದಿದ್ದು ಅವರು ಸ್ಪಷ್ಟನೆ ನೀಡಿದ್ದು ಶೇಕಡ 50 ರಷ್ಟು ಆಸನ ಭರ್ತಿ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಹೇಳಿದ್ದಾರೆ.
ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಸಿನಿಮಾ ವೀಕ್ಷಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ತಿಳಿಸಿದ್ದಾರೆ.