ನವದೆಹಲಿ: ಕರ್ನಾಟಕದ 4 ಮೆಡಿಕಲ್ ಕಾಲೇಜುಗಳು ಸೇರಿದಂತೆ ದೇಶಾದ್ಯಂತ 157 ವೈದ್ಯಕೀಯ ಕಾಲೇಜುಗಳನ್ನು ಶೀಘ್ರವೇ ಆರಂಭಿಸಲಾಗುವುದು.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, 157 ಮೆಡಿಕಲ್ ಕಾಲೇಜುಗಳನ್ನು ಶೀಘ್ರ ಆರಂಭಿಸಲಾಗುವುದು. ಮೊದಲ ಹಂತದಲ್ಲಿ 58, ಎರಡನೇ ಹಂತದಲ್ಲಿ 24, ಮೂರನೇ ಹಂತದಲ್ಲಿ 75 ಮೆಡಿಕಲ್ ಕಾಲೇಜುಗಳು ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 2019 – 20 ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಯಾದಗಿರಿಯಲ್ಲಿ ತಲಾ 150 ಸೀಟ್ ಸಾಮರ್ಥ್ಯದ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ಅನುಮೋದನೆ ನೀಡಲಾಗಿದ್ದು, ಶೀಘ್ರವೇ ಈ ಕಾಲೇಜುಗಳು ಆರಂಭವಾಗಲಿವೆ. ಕೇಂದ್ರ ಸರ್ಕಾರ ಶೇಕಡ 60 ಹಾಗೂ ರಾಜ್ಯ ಸರ್ಕಾರ ಶೇಕಡ 40 ರಷ್ಟು ನಿರ್ಮಾಣ ವೆಚ್ಚವನ್ನು ಭರಿಸಿವೆ ಎಂದು ಸಚಿವರು ಹೇಳಿದ್ದಾರೆ.
ದೇಶದಲ್ಲಿ 2014 ರವರೆಗೆ 50 ಸಾವಿರ ವೈದ್ಯಕೀಯ ಕೋರ್ಸ್ ಸೀಟುಗಳು ಇದ್ದವು. ಕಳೆದ 6 ವರ್ಷದ ಅವಧಿಯಲ್ಲಿ 30 ಸಾವಿರ ಹೆಚ್ಚುವರಿ ಸೀಟುಗಳು ಲಭ್ಯವಾಗಿವೆ. ಹೊಸ ಕಾಲೇಜ್ ಗಳ ಆರಂಭದ ನಂತರ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.