ಕೊರೊನಾ ವೈರಸ್ ವಿಶ್ವಕ್ಕೆ ಕಾಲಿಟ್ಟು ಒಂದು ವರ್ಷದ ಮೇಲಾಗಿದೆ. ಈಗ್ಲೂ ಕೊರೊನಾ ನಿಯಂತ್ರಣ ಸಾಧ್ಯವಾಗಿಲ್ಲ. ಬೇರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಕೊರೊನಾ ಸೋಂಕು ಬೇಗ ಕಾಣಿಸಿಕೊಳ್ಳುತ್ತದೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವುದು ಇದಕ್ಕೆ ಕಾರಣ. ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರ ಜೊತೆ ಈಗ ಪಿಸಿಓಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಹೊಂದಿರುವ ಮಹಿಳೆಯರಿಗೆ ಕೊರೊನಾ ಸೋಂಕು ಬೇಗ ಕಾಣಿಸಿಕೊಳ್ಳಲಿದೆ ಎನ್ನಲಾಗ್ತಿದೆ.
ಯುರೋಪಿಯನ್ ಜರ್ನಲ್ ಆಫ್ ಎಂಡೋಕ್ರೈನಾಲಜಿಯಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಪಿಸಿಓಎಸ್ ಹೊಂದಿರುವ ಮಹಿಳೆಯರು ಕೋವಿಡ್ -19 ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಈ ಅಧ್ಯಯನದಲ್ಲಿ, ಪಿಸಿಓಎಸ್ ಮತ್ತು ಕೋವಿಡ್ -19 ನಡುವಿನ ಸಂಬಂಧವೇನು ಎಂದು ತನಿಖೆ ಮಾಡಲಾಗಿದೆ. ಪಿಸಿಓಎಸ್ ಹೊಂದಿರುವ ಮಹಿಳೆಯರಿಗೆ ಕೋವಿಡ್ -19 ಅಪಾಯ ಶೇಕಡಾ 51 ರಷ್ಟು ಹೆಚ್ಚಿದೆ ಎಂದು ಅಧ್ಯಯನದಲ್ಲಿ ಪತ್ತೆಯಾಗಿದೆ.
ಪಿಸಿಓಎಸ್ ಅಂದರೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್. ಮಹಿಳೆಯರಲ್ಲಿ ಮಾತ್ರ ಕಂಡುಬರುವ ಒಂದು ಕಾಯಿಲೆ. ಇದು ದೇಹದ ಹಾರ್ಮೋನುಗಳು ಮತ್ತು ಚಯಾಪಚಯ ಕ್ರಿಯೆಗೆ ಸಂಬಂಧಿಸಿದೆ. ವಿಶ್ವದ ಪ್ರತಿ 5 ಮಹಿಳೆಯರಲ್ಲಿ ಒಬ್ಬರು ಪಿಸಿಓಎಸ್ ನಿಂದ ಬಳಲುತ್ತಾರೆ. ಇದಕ್ಕೆ ಸಾಮಾನ್ಯ ಕಾರಣವೆಂದರೆ ನಿಷ್ಕ್ರಿಯ ಜೀವನಶೈಲಿ.
ಅನಿಯಮಿತ ಮುಟ್ಟಿನ ಅವಧಿ, ಮುಟ್ಟಿನ ವೇಳೆ ಅತಿಯಾದ ರಕ್ತಸ್ರಾವ, ದೇಹ ಮತ್ತು ಮುಖದ ಮೇಲೆ ಅನಗತ್ಯ ಕೂದಲು, ಮೊಡವೆ, ತೂಕ ಹೆಚ್ಚಾಗುವುದು, ತಲೆ ಕೂದಲು ಉದುರುವುದು, ಗರ್ಭಧಾರಣೆಗೆ ಅಡ್ಡಿ ರೋಗದ ಲಕ್ಷಣವಾಗಿದೆ.
ಪಿಸಿಓಎಸ್ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರಿಗೆ ಹೃದ್ರೋಗ, ಟೈಪ್ 2 ಡಯಾಬಿಟಿಸ್, ಪಿತ್ತಜನಕಾಂಗದ ಕಾಯಿಲೆ, ಅಧಿಕ ರಕ್ತದೊತ್ತಡ ಇತ್ಯಾದಿಗಳ ಅಪಾಯವಿದೆ.