ಟೀ ಶರ್ಟ್ ಧರಿಸಿ ಸದನಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಗುಜರಾತ್ನ ಕಾಂಗ್ರೆಸ್ ಶಾಸಕ ವಿಮಲ್ ಚುದಸಮಾರನ್ನ ಸ್ಪೀಕರ್ ರಾಜೇಂದ್ರ ತ್ರಿವೇದಿ ಸೋಮವಾರ ಸದನದಿಂದ ಹೊರಗಟ್ಟಿದ್ದಾರೆ.
ಸದನದಲ್ಲಿ ಶಾಸಕರು ಶಿಸ್ತನ್ನ ಕಾಪಾಡಬೇಕು. ಟೀ ಶರ್ಟ್ ಧರಿಸಿ ಸದನಕ್ಕೆ ಬರೋದು ಗೌರವವಲ್ಲ ಎಂದು ಸ್ಪೀಕರ್ ಹೇಳಿದ್ರೆ. ಕಾಂಗ್ರೆಸ್ ಈ ಮಾತನ್ನ ವಿರೋಧಿಸಿದೆ. ಸದನದ ಒಳಕ್ಕೆ ಬರಲು ಶಾಸಕರಿಗೆ ಯಾವುದೇ ಡ್ರೆಸ್ಕೋಡ್ ಇಲ್ಲ ಎಂದು ವಾದ ಮಾಡಿದೆ.
ಕಳೆದೊಂದು ವಾರದ ಹಿಂದೆ, ಮೊದಲ ಬಾರಿಗೆ ಸದನಕ್ಕೆ ಶಾಸಕ ವಿಮಲ್ ಟೀ ಶರ್ಟ್ ಧರಿಸಿ ಬಂದಿದ್ದನ್ನ ಕಂಡ ಸಭಾಪತಿ ತ್ರಿವೇದಿ ಇದನ್ನ ಮತ್ತೆ ಮುಂದುವರಿಸಬೇಡಿ ಎಂದು ವಾರ್ನಿಂಗ್ ನೀಡಿದ್ದರು. ಅಲ್ಲದೇ ಸದನದ ಘನತೆಯನ್ನ ಕಾಪಾಡೋದು ಶಾಸಕರ ಕರ್ತವ್ಯ. ಹೀಗಾಗಿ ಶರ್ಟ್ ಇಲ್ಲವೇ ಕುರ್ತಾ ಧರಿಸಿ ಬನ್ನಿ ಎಂತಲೂ ಕಿವಿಮಾತನ್ನ ಹೇಳಿದ್ದರು.
ಆದರೆ ಸೋಮನಾಥ್ ಕ್ಷೇತ್ರದ ಶಾಸಕ ವಿಮಲ್ ಮತ್ತೆ ಸೋಮವಾರ ಟೀ ಶರ್ಟ್ ಧರಿಸಿ ಸದನಕ್ಕೆ ಹಾಜರಾಗಿದ್ದರು. ಹಿಂದಿನ ಸೂಚನೆಗೆ ಅಗೌರವ ತೋರಿದನ್ನ ನೆನಪಿಸಿದ ತ್ರಿವೇದಿ ಶರ್ಟ್, ಕುರ್ತಾ ಇಲ್ಲವೇ ಬ್ಲೇಜರ್ ಧರಿಸಿ ಸದನದ ಒಳಕ್ಕೆ ಬನ್ನಿ ಎಂದು ತಾಕೀತು ಮಾಡಿದ್ದಾರೆ.
ಸ್ಪೀಕರ್ ಆದೇಶದಿಂದ ಅಸಮಾಧಾನಗೊಂಡ ಶಾಸಕ ವಿಮಲ್ ಟೀ ಶರ್ಟ್ ಧರಿಸೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಇದೇ ರೀತಿ ಟೀ ಶರ್ಟ್ ಧರಿಸಿ ಚುನಾವಣಾ ಪ್ರಚಾರ ಮಾಡಿ ನಾನು ಜಯಭೇರಿ ಆಗಿದ್ದೇನೆ ಅಂತಲೂ ಹೇಳಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿದ ತ್ರಿವೇದಿ, ನೀವು ಮತದಾರರನ್ನ ಹೇಗೆ ಸಂಪರ್ಕ ಮಾಡಿದ್ರಿ ಅನ್ನೋದನ್ನ ತಿಳಿಯಲು ನನಗೆ ಯಾವುದೇ ಆಸಕ್ತಿ ಇಲ್ಲ. ನೀವು ಶಾಸಕರಾಗಿರೋದ್ರಿಂದ ಸದನದ ಗೌರವ ಕಾಪಾಡೋದು ನಿಮ್ಮ ಧರ್ಮ. ನಿಮಗೆ ಬೇಕಾದಂತೆ ಡ್ರೆಸ್ ಹಾಕಿಕೊಂಡು ಸದನದ ಒಳಗೆ ಬರಲು ಅವಕಾಶವಿಲ್ಲ. ಇದು ಆಟದ ಮೈದಾನವಲ್ಲ. ಸದನಕ್ಕೆ ತನ್ನದೇ ಆದ ಶಿಸ್ತಿದೆ ಎಂದು ಹೇಳಿದ್ದಾರೆ.