ನವದೆಹಲಿ: ರಾಜಧಾನಿ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಗಳು ಮತ್ತೆ ಪ್ರವೇಶಿಸಲಿವೆ. ಸಂಸತ್ನಲ್ಲಿ ಹೊಸ ಮಂಡಿ ತೆರೆಯಲಾಗುವುದು ಎಂದು ಭಾರತೀಯ ಕಿಸಾನ್ ನಾಯಕ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಚುನಾವಣೆಯ ಯುದ್ಧ ಭೂಮಿಯಾಗಿದೆ. ಬಿಜೆಪಿ ಸರ್ಕಾರ ಕಾರ್ಪೊರೇಟರ್ ಗಳ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರೈತರು ತಮ್ಮ ಬೆಳೆಗಳನ್ನು ಎಪಿಎಂಸಿ ಹೊರಗೆ ಮಾರಾಟ ಮಾಡಬಹುದು, ಮಂಡಿಯ ಹೊರಗೆ ಮಾರಾಟ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂಸತ್ ಮಂಡಿ ಸ್ಥಾಪನೆಗೆ ಅತ್ಯುತ್ತಮ ಸ್ಥಳ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅದರೊಳಗೆ ವ್ಯಾಪಾರಿ ಕುಳಿತಿದ್ದಾನೆ. ಹೊರಗೆ ರೈತ ಇದ್ದಾನೆ. ಹಾಗಾಗಿ ಸಂಸತ್ನಲ್ಲಿಯೇ ಹೊಸ ಮಂಡಿ ಸ್ಥಾಪಿಸುತ್ತೇವೆ ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ತೀರ್ಮಾನ ಕೈಗೊಂಡ ದಿನದಂದು ಸಂಸತ್ನಲ್ಲಿ ಹೊಸ ಮಂಡಿ ಸ್ಥಾಪನೆ ಮಾಡಲಾಗುವುದು. 3.5 ಲಕ್ಷ ಟ್ರ್ಯಾಕ್ಟರ್ ಗಳು ಮತ್ತು 25 ಲಕ್ಷ ರೈತರು ಒಂದೇ ದಿನ ದೆಹಲಿಗೆ ಪ್ರವೇಶಿಸಲಿದ್ದಾರೆ. ನಮ್ಮ ಮುಂದಿನ ಗುರಿ ಸಂಸತ್ನಲ್ಲಿ ಬೆಳೆಗಳನ್ನು ಮಾರಾಟ ಮಾಡುವುದಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕೊಲ್ಕೊತ್ತಾದಲ್ಲಿ ರೈತ ಪಂಚಾಯತ್ ನಡೆಸಿದೆ. ಈ ಕಾರಣಕ್ಕೆ ಇಲ್ಲಿಗೆ ಆಗಮಿಸಿದ ರಾಕೇಶ್ ಟಿಕಾಯತ್ ನಂದಿಗ್ರಾಮಕ್ಕೆ ಭೇಟಿ ನೀಡಿದ್ದರು.
ನಂದಿಗ್ರಾಮದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯಿಂದ ಸುವೆಂದು ಅಧಿಕಾರಿ ಸ್ಪರ್ಧಿಸಿದ್ದಾರೆ. ನಂದಿಗ್ರಾಮ ದೇಶದ ಗಮನಸೆಳೆದ ಕ್ಷೇತ್ರವಾಗಿದೆ.