ನವದೆಹಲಿ: ದೇಶದಲ್ಲಿ ಸಾಮೂಹಿಕ ರೋಗ ನಿರೋಧಕ ಶಕ್ತಿ ಜನರಲ್ಲಿ ವೃದ್ಧಿಯಾಗಲು ಇನ್ನು ಎರಡು ವರ್ಷ ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಪೂರ್ವ ನಿಗದಿಗಿಂತ ಭಾರತದಲ್ಲಿ ಲಸಿಕೆ ನೀಡಿಕೆ ವಿಳಂಬವಾಗಿದೆ. ಈ ಕಾರಣದಿಂದ ಹರ್ಡ್ ಇಮ್ಯುನಿಟಿ ಬರಲು ಎರಡು ವರ್ಷ ಬೇಕಾಗುತ್ತದೆ. ದೇಶದ 80 ಕೋಟಿ ಜನರಿಗೆ ಲಸಿಕೆ ನೀಡಲು 2 ವರ್ಷ ಬೇಕಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಜುಲೈ ವೇಳೆಗೆ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಲಸಿಕೆ ಆಂದೋಲನ ವಿಳಂಬವಾಗುತ್ತಿದ್ದು, ಯಾವ ರಾಜ್ಯದಲ್ಲಿಯೂ ಗುರಿತಲುಪುವ ಸಾಧ್ಯತೆಯಿಲ್ಲ. ಈ ವೇಗದಲ್ಲಿ ಲಸಿಕೆ ನೀಡಿದರೆ ದೇಶದ ಜನರಲ್ಲಿ ಸಾಮೂಹಿಕ ರೋಗನಿರೋಧಕ ಶಕ್ತಿ ವೃದ್ಧಿಯಾಗಲು 800 ದಿನ ಬೇಕಾಗಬಹುದು.
2021 ರ ಜನವರಿಯಿಂದ ಜುಲೈ ಒಳಗೆ ದೇಶದ 30 ಕೋಟಿ ಜನರಿಗೆ ಲಸಿಕೆ ನೀಡಬೇಕಿದೆ. ಇವರಲ್ಲಿ ಆರೋಗ್ಯ ಕಾರ್ಯಕರ್ತರು, ಕೊರೋನಾ ವಾರಿಯರ್ಸ್, 60 ವರ್ಷ ಮೇಲ್ಪಟ್ಟವರು ಮತ್ತು ಆರೋಗ್ಯ ಸಂಬಂಧಿ ಸಮಸ್ಯೆ ಇರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಸದ್ಯ ದೇಶದಲ್ಲಿ ಪ್ರತಿದಿನ 17 ರಿಂದ 18 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದೆ.
ರೋಗನಿರೋಧಕ ಶಕ್ತಿ ವೃದ್ಧಿಯಾಗಲು 80 ಕೋಟಿ ಜನರಿಗೆ ಜನರಿಗೆ ನೀಡಬೇಕಿದೆ. ಪ್ರತಿದಿನ 20 ಲಕ್ಷ ಮಂದಿಗೆ ಲಸಿಕೆ ನೀಡಿದರೂ 80 ಕೋಟಿ ಜನರಿಗೆ ಲಸಿಕೆ ನೀಡಲು ಸುಮಾರು 800 ದಿನ ಬೇಕಾಗುತ್ತದೆ. ಭಾರತದಲ್ಲಿನ ಜನಸಂಖ್ಯೆಯನ್ನು ಗಮನಿಸಿದಾಗ ಲಸಿಕೆ ನೀಡುತ್ತಿರುವ ವೇಗ ಭಾರಿ ಕಡಿಮೆ ಎನ್ನಲಾಗಿದೆ.