ಮೈಸೂರು: ಮಹಿಳೆಯೊಬ್ಬರು ಪಾರ್ಕ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದ್ದು, ದೈಹಿಕ ಶಿಕ್ಷಣ ಶಿಕ್ಷಕಿಯೊಬ್ಬರು ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಮಗು ಹಾಗೂ ಮಹಿಳೆಯನ್ನು ರಕ್ಷಿಸಿದ್ದಾರೆ.
ಮೈಸೂರಿಗೆ ಬಂದಿದ್ದ ಕೊಡಗು ಮೂಲದ ಮಹಿಳೆ ಗ್ರಾಮಾಂತರ ಬಸ್ ನಿಲ್ದಾಣದ ಎದುರಿನ ಪೀಪಲ್ಸ್ ಪಾರ್ಕ್ ನಲ್ಲಿ ಇಬ್ಬರು ಮಕ್ಕಳೊಂದಿಗೆ ಇದ್ದ ವೇಳೆಯಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದೆ. ತುಂಬು ಗರ್ಭಿಣಿಯಾಗಿದ್ದ ಅವರಿಗೆ ಹೇರಿಗೆ ನೋವು ಕಾಣಿಸಿಕೊಂಡು ಒದ್ದಾಡುವುದನ್ನು ಗಮನಿಸಿದ ಪೀಪಲ್ಸ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ಅವರು ನೆರವಿಗೆ ಮುಂದಾಗಿದ್ದಾರೆ.
ಸಾರ್ವಜನಿಕರು ಸಹಾಯ ಮಾಡಿ ಟಾರ್ಪಲ್ ನಿಂದ ಅವರನ್ನು ಮರೆ ಮಾಡಿದ್ದು, ಹೆರಿಗೆ ನಂತರ ಶಿಶುವನ್ನು ಶುಚಿಗೊಳಿಸಿ ಬಾಣಂತಿ, ಮಗುವನ್ನು ನಜರಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮಾಹಿತಿ ಪಡೆದು ಪಾಲಕರ ಜೊತೆಗೆ ಕಳುಹಿಸಲಾಗುವುದು ಎಂದು ಹೇಳಲಾಗಿದೆ.