ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕ್ತಿದೆ. ಹಾಗೆಯೇ 45 ರಿಂದ 60 ವರ್ಷದೊಳಗಿನ ಜನರು ಕೊರೊನಾ ಲಸಿಕೆ ತೆಗೆದುಕೊಳ್ಳಬಹುದು. ಯಾವ ಖಾಯಿಲೆಗೆ ಒಳಗಾದ ವ್ಯಕ್ತಿಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು ಎಂಬ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಖಾಯಿಲೆ ಬಗ್ಗೆ ಪ್ರಮಾಣಪತ್ರ ತೋರಿಸಿದ್ರೆ ಲಸಿಕೆ ಹಾಕಲಾಗುತ್ತದೆ.
ನಕಲಿ ಪ್ರಮಾಣಪತ್ರವನ್ನು ನೀಡಿ, ಜನರು ಕೊರೊನಾ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಖಾಯಿಲೆಯಿಲ್ಲದ ಜನರು ಸುಳ್ಳು ಪ್ರಮಾಣ ಪತ್ರ ತೋರಿಸಿ, ಲಸಿಕೆ ಹಾಕಿಸಿಕೊಳ್ತಿದ್ದಾರೆ. ಒಂದೇ ವೇಳೆ ನೀವು ಈ ಕೆಲಸಕ್ಕೆ ಮುಂದಾಗಿದ್ದರೆ ಎಚ್ಚರ. ನಿಮ್ಮ ತಪ್ಪು ಹೊರಬಿದ್ರೆ ಭಾರೀ ದಂಡ ತೆರಬೇಕಾಗುತ್ತದೆ.
ತಪ್ಪಾದ ಪ್ರಮಾಣಪತ್ರವನ್ನು ತೋರಿಸುವ ಮೂಲಕ ಲಸಿಕೆ ತೆಗೆದುಕೊಂಡಿದ್ದರೆ ನಿಮ್ಮ ವಿಮೆ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ವಿಮಾ ಕಂಪನಿ ಇದನ್ನು ಆಕ್ಷೇಪಿಸುವ ಸಾಧ್ಯತೆಯಿದ್ದು, ಪ್ರೀಮಿಯಂ ಹೆಚ್ಚಿಸುವ ಸಾಧ್ಯತೆಯಿದೆ. ಪಾಲಿಸಿ ತೆಗೆದುಕೊಳ್ಳುವ ವೇಳೆ ನೀವು ಖಾಯಿಲೆಯಿಲ್ಲವೆಂಬ ದಾಖಲೆ ನೀಡಿದ್ದರೆ ಇದು ನಿಮಗೆ ತೊಂದರೆಯಾಗಲಿದೆ.
ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಮೂಲಕ ರೋಗಿಗಳ ಮಾಹಿತಿಯನ್ನು ಸಂಗ್ರಹಿಸುವುದು ವಿಮಾ ಕಂಪನಿಗೆ ದೊಡ್ಡ ವಿಷಯವಲ್ಲ. ಕೊರೊನಾ ಲಸಿಕೆಗಾಗಿ ತಪ್ಪು ಪ್ರಮಾಣಪತ್ರವನ್ನು ಸಿದ್ಧಪಡಿಸಿದ್ದರೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿಮಾ ಕಂಪನಿಗಳು ನಿಮ್ಮ ಅನಾರೋಗ್ಯ ಅಥವಾ ಆರೋಗ್ಯದ ಬಗ್ಗೆ ಕೆವೈಸಿ ಡೇಟಾದ ಮೂಲಕ ಮಾಹಿತಿಯನ್ನು ಪಡೆಯಬಹುದು.