ಬೆಂಗಳೂರು: ಸಿಡಿ ಬಹಿರಂಗವಾದ ನಂತರ ಮಾಧ್ಯಮದಿಂದ ದೂರವೇ ಉಳಿದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊರಬಂದು ಮಾತನಾಡಿದ್ದಾರೆ.
ನಾಲ್ಕು ದಿನಗಳ ಮೊದಲೇ ಸಿಡಿ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಬಂದಿತ್ತು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಹೈಕಮಾಂಡ್ ನನಗೆ 24 ಗಂಟೆಯ ಮೊದಲೇ ಮಾಹಿತಿ ನೀಡಿತ್ತು. ಸಿಡಿ ಬಿಡುಗಡೆಯ ಬಗ್ಗೆ ನನಗೆ ಮಾಹಿತಿ ನೀಡಿದ್ದರು. ಇದು ನೂರಕ್ಕೆ ನೂರರಷ್ಟು ನಕಲಿ ಸಿಡಿ ಆಗಿದೆ. ನಾನು ಧೈರ್ಯದಿಂದ ಇದ್ದ ಕಾರಣ ಕಾನೂನು ಹೋರಾಟಕ್ಕೆ ಹೋಗಲಿಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.
ರಾಸಲೀಲೆ ಸಿಡಿ ಶೇಕಡ ನೂರರಷ್ಟು ನಕಲಿಯಾಗಿದೆ. ನಾನು ನಿರಪರಾಧಿಯಾಗಿದ್ದೇನೆ. ಅಪರಾಧಿಯಲ್ಲ. ಯುವತಿಗೆ 5 ಕೋಟಿ ನೀಡಿರುವ ಬಗ್ಗೆ ಮಾಹಿತಿ ಇದೆ. ಇದರ ವಿರುದ್ಧ ನಾನೇಕೆ ದೂರು ನೀಡಲು ಹೋಗಲಿ. ಆರೋಪವನ್ನು ನಾನು ಧೈರ್ಯವಾಗಿ ಎದುರಿಸುತ್ತೇನೆ. ನನ್ನ ವಿರೋಧಿಗಳಿಗೆ ಇದೊಂದು ದೊಡ್ಡ ಅಸ್ತ್ರವಾಗಿದೆ ಎಂದು ತಿಳಿಸಿದ್ದಾರೆ.
ನನಗೆ ಖಾತೆ ಬೇಕೆಂದು ನಾನು ಕೇಳುವುದಕ್ಕೆ ಹೋಗುವುದಿಲ್ಲ. ನನಗೆ ಕುಟುಂಬದ ಗೌರವ ಮುಖ್ಯ. ಯುವತಿಗೆ ವಿದೇಶದಲ್ಲಿ ಎರಡು ಅಪಾರ್ಟ್ಮೆಂಟ್ ನೀಡಿರುವ ಮಾಹಿತಿ ಇದೆ. ನನಗೆ ಎಲ್ಲ ಪಕ್ಷದವರ ಮೇಲೆ ಗೌರವ ಇದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಬಿಡುವುದೇ ಇಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ನಾನು ಇದುವರೆಗೆ ಯಾರ ವಿರುದ್ಧವೂ ಆರೋಪ ಮಾಡಿಲ್ಲ. ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಹಾಕದೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ನನ್ನ ಪರವಾಗಿ ಮೊದಲು ಮಾತಾಡಿದ್ದಾರೆ. ಕುಮಾರಸ್ವಾಮಿ ಮತ್ತು ರೇವಣ್ಣ ಮಾತನಾಡಿದ್ದರು ಎಂದು ಹೇಳಿದ್ದಾರೆ.