ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡನೆ ವೇಳೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಇದು ನೈತಿಕ ಸರ್ಕಾರವಲ್ಲ, ಹಾಗಾಗಿ ಸಭಾತ್ಯಾಗ ಮಾಡಿದ್ದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಇದಕ್ಕೆ ಕೆಂಡಾಮಂಡಲರಾದ ಸಿಎಂ, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಮತ್ತೆ ವಿರೋಧ ಪಕ್ಷದಲ್ಲಿ ಕೂರುವಂತೆ ಮಾಡದಿದ್ದರೆ ನನ್ನ ಹೆಸರನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಗುಡುಗಿದ್ದಾರೆ.
ಬಜೆಟ್ ಮಂಡನೆ ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, ವಿಧಾನಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿದ್ದು ಸರಿಯಲ್ಲ. ಏನೇ ವಿಷಯವಿದ್ದರೂ ಚರ್ಚೆ ಮಾಡಬಹುದಿತ್ತು. ನೈತಿಕ ಸರ್ಕಾರವಲ್ಲವೆಂದ ಕಾಂಗ್ರೆಸ್ ನೈತಿಕತೆ ಪ್ರಶ್ನೆಗೆ ಬಿ.ಎಸ್.ವೈ. ಕೆಂಡಾಮಂಡಲರಾಗಿದ್ದು, ಮುಂದಿನ ಚುನಾವಣೆಯಲ್ಲಿ ನಾವು 130 ರಿಂದ 135 ಸೀಟು ಗೆಲ್ಲುತ್ತೇವೆ. ಸಿದ್ದರಾಮಯ್ಯನವರನ್ನು ಪ್ರತಿಪಕ್ಷ ಸ್ಥಾನದಲ್ಲಿ ಕೂರಿಸುತ್ತೇವೆ. ಇಲ್ಲದಿದ್ದರೆ ನನ್ನ ಹೆಸರು ಯಡಿಯೂರಪ್ಪ ಅಲ್ಲ ಎಂದು ಶಪಥ ಮಾಡಿದ್ದಾರೆ. ಸಭಾತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದಕ್ಕೆ ಸಿಎಂ ಶಪಥ ಮಾಡಿದ್ದು, ನೈತಿಕ ಸರ್ಕಾರವಲ್ಲ ಎನ್ನುವ ಪ್ರಶ್ನೆಗೆ ಕೆಂಡಾಮಂಡಲರಾಗಿದ್ದಾರೆ.
ಯಡಿಯೂರಪ್ಪನವರ ಶಪಥಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅದು ಭ್ರಮೆ ಎಂದು ತಣ್ಣನೆ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸುವುದು ಭ್ರಮೆ ಮತ್ತು ಕನಸು. ನನಗೆ ತಲೆ ಸರಿ ಇರುವುದರಿಂದಲೇ ಇವೆಲ್ಲವನ್ನು ಹೇಳಿದ್ದೇನೆ. ಪೆಟ್ರೋಲ್ ಸುಂಕ ಇಳಿಕೆ ಮಾಡಿ ಬಜೆಟ್ನಲ್ಲಿ ಯೋಜನೆ ತರಬೇಕಿತ್ತು. ಕೇಂದ್ರದಲ್ಲೂ ತೆರಿಗೆ ಇಳಿಕೆಗೆ ಹೇಳಬೇಕಿತ್ತು. ಆದರೆ, ಬಿಜೆಪಿಯವರಿಗೆ ಪ್ರತಿಭಟಿಸುವ ತಾಕತ್ತಿಲ್ಲ. ಬಿಜೆಪಿಯವರು ಮುಂದೆ ಚುನಾವಣೆಗೆ ಹೋದಾಗ ಗೊತ್ತಾಗುತ್ತದೆ. ಇದು ಅನೈತಿಕ ಸರ್ಕಾರವಾಗಿದ್ದರಿಂದ ಬಜೆಟ್ ವೇಳೆ ವಿರೋಧ ಮಾಡಲಾಗಿತ್ತು ಎಂದು ಹೇಳಿದ್ದಾರೆ.