ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಪುಂಡಾಟ ಮೆರೆದಿದ್ದು, ಮಹಾನಗರ ಪಾಲಿಕೆ ಎದುರು ಹಾರಾಡುತ್ತಿದ್ದ ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರ ಸರ್ಪಗಾವಲಿನ ನಡುವೆಯೂ ಖಾಕಿ ಕಣ್ತಪ್ಪಿಸಿ ಪಾಲಿಕೆ ಆವರಣಕ್ಕೆ ನುಗ್ಗಿ ಭಗವಾ ಧ್ವಜ ನೆಡಲು ಮುಂದಾದ ಎಂಇಎಸ್ ನ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಜಿ ಮೇಯರ್ ಸರಿತಾ ಪಾಟೀಲ್ ಸೇರಿದಂತೆ ಹಲವು ಮಹಿಳೆಯರು ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ತೆರವಿಗೆ ಮುಂದಾಗಿದ್ದು, ಆ ಜಾಗದಲ್ಲಿ ಭಗವಾ ಧ್ವಜ ಹಾರಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಎಂಇಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಮಾಜಿ ಮೇಯರ್ ಸೇರಿದಂತೆ 10ಕ್ಕೂ ಹೆಚ್ಚು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಂಇಎಸ್ ಪುಂಡಾಟ ಬೆನ್ನಲ್ಲೇ ಬೆಳಗಾವಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಡಿಸಿಪಿ ವಿಕ್ರಂ ಅಮ್ಟೆ ಹಾಗೂ ಡಿಎಸ್ ಪಿ ನೇತೃತ್ವದಲ್ಲಿ ಕನ್ನಡ ಧ್ವಜಕ್ಕೆ ರಕ್ಷಣೆ ನೀಡಲಾಗಿದೆ.