ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದಿದ್ದಾರೆ.
ನಂತರದಲ್ಲಿ ಕೆಕೆ ಗೆಸ್ಟ್ ಹೌಸ್ ನಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿಯಿಂದ ಬೆಂಗಳೂರುವರೆಗೂ ನಂಟಿರುವ ಸಾಧ್ಯತೆ ಇದೆ. ದಿನೇಶ್ ಕಲ್ಲಹಳ್ಳಿ ಅವರನ್ನು ಮಿಸ್ ಗೈಡ್ ಮಾಡಿರುವ ಸಾಧ್ಯತೆಯಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಹಲವು ಸಚಿವರು, ಶಾಸಕರ ಬಗ್ಗೆಯೂ ಇಂತಹ ನಕಲಿ ಸಿಡಿಗಳನ್ನು ಸೃಷ್ಟಿಸಿರುವ ಆರೋಪ ಕೇಳಿಬಂದಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಕಾಣದ ಕೈಗಳ ಕೈವಾಡ ಹೊರಬರಲು ಸಿಬಿಐ ತನಿಖೆಗೆ ವಹಿಸಬೇಕು. ನಕಲಿ ಸಿಡಿಗಾಗಿ 15 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಹನಿಟ್ರ್ಯಾಪ್ ರೀತಿ ಇದನ್ನು ಪ್ಲಾನ್ ಮಾಡಿ ಷಡ್ಯಂತ್ರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ದೂರುದಾರ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆಯಲು ನಿರ್ಧಾರ ಮಾಡಿದ್ದಾರೆ. ಅವರಿಗೆ ದಾರಿತಪ್ಪಿಸುವ ಸಾಧ್ಯತೆ ಇದೆ. ಯುವತಿಗೆ 50 ಲಕ್ಷ ರೂ. ಹಣ ನೀಡಿ ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪೊಲೀಸರು ತನಿಖೆ ಮುಂದುವರೆಸಬೇಕಿದೆ. ಇದರ ಹಿಂದಿನ ಸತ್ಯವನ್ನು ಹೊರಗೆಳೆಯಲು ಸಿಬಿಐ ತನಿಖೆಗೆ ವಹಿಸಬೇಕಿದೆ ಎಂದು ತಿಳಿಸಿದ್ದಾರೆ.
ಮರ್ಯಾದೆ, ಗೌರವ ಹೋದರೆ ವಾಪಸ್ ಬರುತ್ತಾ? ನಾವು ಸತತವಾಗಿ ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ರಮೇಶ ಜಾರಕಿಹೊಳಿ ಸಚಿವ ಸ್ಥಾನದಿಂದ ತೆಗೆಯಬೇಕೆಂಬ ಒಂದೇ ಉದ್ದೇಶದಿಂದಲೇ ಪ್ರಕರಣಕ್ಕೆ ನಾಲ್ಕು ತಂಡಗಳು ಕೆಲಸ ಮಾಡಿದೆ. 15 ಕೋಟಿ ರೂ. ಖರ್ಚು ಮಾಡಿ 17 ಸರ್ವರ್ ಬುಕ್ ಮಾಡಿ ವಿದೇಶಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ. ದಿನೇಶ್ ಕಲ್ಲಹಳ್ಳಿ ದೂರು ನೀಡುವ 3 ಮೊದಲು ಯೂಟ್ಯೂಬ್ ಸೇರಿದಂತೆ ಹಲವು ಆನ್ಲೈನ್ ಸೈಟ್ ಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಮೇಶ ಜಾರಕಿಹೊಳಿ ಮಾಧ್ಯಮದವರ ಎದುರು ಬಂದು ಹೇಳಿಕೆ ನೀಡಬೇಕು ಎಂದು ವಿನಂತಿ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ದೂರು ನೀಡದಿದ್ದರೆ ನಾವೇ ದೂರು ನೀಡುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.