ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದಿದ್ದಾರೆ.
ಇದಾದ ನಂತರದಲ್ಲಿ ಕೆಕೆ ಗೆಸ್ಟ್ ಹೌಸ್ ನಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ಸಿಡಿ ಸ್ಫೋಟದ ಹಿಂದೆ ಷಡ್ಯಂತ್ರವಿದೆ ಎಂದು ಹೇಳಿದ್ದಾರೆ.
17 ಸರ್ವರ್ ಬುಕ್ ಮಾಡಿ ವಿದೇಶಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ. ದಿನೇಶ್ ಕಲ್ಲಹಳ್ಳಿ ದೂರು ನೀಡುವ 3 ಮೊದಲು ಯೂಟ್ಯೂಬ್ ಸೇರಿದಂತೆ ಹಲವು ಆನ್ಲೈನ್ ಸೈಟ್ ಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯುವತಿಗೆ ಅನ್ಯಾಯವಾಗಿದ್ದರೆ ನಾವೆಲ್ಲರೂ ಸೇರಿ ನ್ಯಾಯ ಕೊಡಿಸೋಣ. ಆದರೆ, ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಮಹಿಳೆ ಹಿಂದೆ ನಾಲ್ವರು ಇದ್ದಾರೆ. ಅವರ ಹಿಂದೆ ಒಂದು ದೊಡ್ಡ ತಂಡವೇ ಇದೆ. ಆಕೆಯನ್ನು ಸಂತ್ರಸ್ತ ಮಹಿಳೆ ಎಂದು ದಯವಿಟ್ಟು ಕರೆಯಬೇಡಿ. ರಾಜಕೀಯವಾಗಿ ರಮೇಶ್ ಹಾಳು ಮಾಡುವ ಉದ್ದೇಶದಿಂದ ಕೋಟಿ ಕೋಟಿ ಹಣ ನೀಡಿ ಸರ್ವರ್ ಬುಕ್ ಮಾಡಲಾಗಿದೆ. ಇದರ ಹಿಂದಿನ ಷಡ್ಯಂತ್ರ ಹೊರಬರಲು ಸಮಗ್ರ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.