ಅಹಮದಾಬಾದ್: ಗಂಡನಿಂದ ದೂರವಾಗಿದ್ದ ಮಹಿಳೆಯನ್ನು ಲಾಡ್ಜ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಇದರಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ ಗಂಡನಿಂದ ದೂರವಾಗಿದ್ದಾಳೆ. ಆಕೆ ತನ್ನ ಸಹೋದರ ಸಂಬಂಧಿ ಮೂಲಕ ಮಾಟಗಾರನೊಬ್ಬನನ್ನು ಭೇಟಿಯಾಗಿದ್ದಾಳೆ. ಆತ ಪೂಜೆ ಮಾಡಿದರೆ ಗಂಡ ನಿನ್ನನ್ನು ನೋಡಿಕೊಳ್ಳುತ್ತಾನೆ ಎಂದು ನಂಬಿಸಿ ಮಹಿಳೆಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ,, ಮೊಬೈಲ್ ಫೋನ್ನಲ್ಲಿ ಲೈಂಗಿಕ ದೌರ್ಜನ್ಯದ ವಿಡಿಯೋ ಸೆರೆಹಿಡಿದು ಬ್ಲಾಕ್ಮೇಲ್ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾಳೆ. ಈತನ ಕಿರುಕುಳದಿಂದ ಬೇಸತ್ತ ಮಹಿಳೆ ನಿದ್ದೆ ಮಾತ್ರೆಗಳನ್ನು ಸೇವಿಸಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯ ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಹಮದಾಬಾದ್ ವಡಾಜ್ ಪ್ರದೇಶದಲ್ಲಿ ವಾಸಿಯಾಗಿರುವ ಮಹಿಳೆ ಎರಡು ವರ್ಷಗಳ ಹಿಂದೆ ಗಂಡನಿಂದ ದೂರವಾಗಿದ್ದಾಳೆ. ಸೋದರ ಸಂಬಂಧಿಯ ಸಹಾಯದಿಂದ ಆನಂದ್ ವಘೇಲಾ ಎಂಬುವನನ್ನು ಭೇಟಿಯಾಗಿದ್ದಾಳೆ. ತಾಂತ್ರಿಕ ಪೂಜೆಗಳನ್ನು ಮಾಡುವ ಮೂಲಕ ಗಂಡನನ್ನು ಭೇಟಿ ಮಾಡಿಸುವುದಾಗಿ ಹೇಳಿದ ಆನಂದ್ ಮಹಿಳೆಯನ್ನು ನಂಬಿಸಿದ್ದಾನೆ.
ಗಂಡನನ್ನು ಮರಳಿ ಪಡೆಯಲು ಸಹಾಯ ಮಾಡುತ್ತಾನೆ ಎಂದು ನಂಬಿದ ಮಹಿಳೆ ಆನಂದ್ ಹೇಳಿದಂತೆ ಕೇಳಿದ್ದಾಳೆ. ಆಕೆಯನ್ನು ಬೇರೆಬೇರೆ ಹೋಟೆಲ್ ಗಳಿಗೆ ಕರೆದುಕೊಂಡು ಹೋದ ಆರೋಪಿ ಲೈಂಗಿಕ ದೌರ್ಜನ್ಯವೆಸಗಿ ತನ್ನ ಮೊಬೈಲ್ ಫೋನ್ನಲ್ಲಿ ಮಹಿಳೆಗೆ ಗೊತ್ತಾಗದಂತೆ ವಿಡಿಯೋ ಮಾಡಿಕೊಂಡಿದ್ದಾನೆ. ನಂತರ 2.50 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟು ಬ್ಲಾಕ್ಮೇಲ್ ಮಾಡಿದ್ದಾನೆ.
ಈತನ ಕಿರುಕುಳ ಸಹಿಸಲಾಗದೆ ಮಹಿಳೆ ತಾನು ಕೆಲಸ ಮಾಡುವ ಆಸ್ಪತ್ರೆಯಿಂದ ನಿದ್ದೆ ಮಾತ್ರೆ ತಂದು ಸೇವಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.