ಬಳ್ಳಾರಿ: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವ ಕುರಿತಾಗಿ ಸರ್ಕಾರದಿಂದ ಶೀಘ್ರವೇ ಸಿಹಿಸುದ್ದಿ ಸಿಗಲಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ಹೂವಿನಹಡಗಲಿ ಶ್ರೀಪೀಠದ ಮೈಲಾರ ಶಾಖಾಮಠದಲ್ಲಿ ಕುರುಬ ಸಮಾಜದ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪಾದಯಾತ್ರೆ, ಸಮಾವೇಶ ನಡೆಸಲಾಗಿದ್ದು ಇದನ್ನು ಎಲ್ಲಾ ಸಮುದಾಯಗಳು ಒಪ್ಪಿಕೊಳ್ಳುವಂತೆ ಇತ್ತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದು ಮಾರ್ಚ್ 9 ಇಲ್ಲವೆ 10 ರಂದು ಮುಖ್ಯಮಂತ್ರಿಗಳೊಂದಿಗೆ ಹೋರಾಟ ಸಮಿತಿಯ ಪ್ರಮುಖರು ಭೇಟಿಯಾಗಲಿದ್ದಾರೆ. ಶೀಘ್ರವೇ ಮೀಸಲಾತಿ ವಿಚಾರದಲ್ಲಿ ಸಿಹಿಸುದ್ದಿ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ತ್ರಿಸದಸ್ಯ ಸಮಿತಿಯನ್ನು ನೇಮಕ ಮಾಡಿರುವುದನ್ನು ಸ್ವಾಗತಿಸುವುದಾಗಿ ಶ್ರೀಗಳು ಹೇಳಿದ್ದಾರೆ.