ತಂದೆ ಗಂಡು ಮಕ್ಕಳ ಖರ್ಚನ್ನ ನಿಭಾಯಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನ ನೀಡಿದೆ. ತಂದೆಯಾದವನು ಪುತ್ರನಿಗೆ 18 ವರ್ಷ ವಯಸ್ಸಾಗುವವರೆಗೆ ಆತನ ಖರ್ಚನ್ನ ನೋಡಿಕೊಂಡರೆ ಸಾಲದು. ಆತ ತನ್ನ ಮೊದಲ ಪದವಿಯನ್ನ ಪಡೆಯುವವರೆಗೂ ಖರ್ಚನ್ನ ನಿಭಾಯಿಸಬೇಕು ಎಂದು ತೀರ್ಪನ್ನ ನೀಡಿದೆ.
ನ್ಯಾಯಮೂರ್ತಿಗಳಾದ ಧನಂಜಯ್ ಚಂದ್ರಚೂಡ್ ಹಾಗೂ ಎಂ.ಆರ್. ಶಾ ನೇತೃತ್ವದ ನ್ಯಾಯಪೀಠ 31 ಮಾರ್ಚ್ 2027ರವರೆಗೂ ಮಗನ ಖರ್ಚನ್ನ ತಂದೆಯೇ ನಿಭಾಯಿಸಬೇಕು ಎಂದು ಈ ಕುರಿತು ಅರ್ಜಿ ಸಲ್ಲಿಸಿದ್ದ ತಂದೆಗೆ ಹೇಳಿದೆ.
ಇಂದಿನ ಪರಿಸ್ಥಿತಿಯಲ್ಲಿ ಪದವಿ ಅನ್ನೋದು ಒಂದು ಮೂಲಭೂತ ಶಿಕ್ಷಣವಾಗಿದೆ. ಹೀಗಾಗಿ ಕೇವಲ ಆತನಿಗೆ ಕಾಲೇಜು ಶಿಕ್ಷಣ ನೀಡಿದರೆ ಸಾಕಾಗೋದಿಲ್ಲ. ಆತ ಪದವಿಯನ್ನ ಸಂಪಾದಿಸುವರೆಗಾದರೂ ನೀವು ಮಗುವಿನ ಖರ್ಚನ್ನ ನೋಡಿಕೊಳ್ಳಲೇಬೇಕು ಎಂದು ಹೇಳಿದೆ.
ಮಗು ಹಾಗೂ ಆತನ ತಾಯಿಯ ಪರ ಕೋರ್ಟ್ಗೆ ಹಾಜರಾದ ವಕೀಲ ಗೌರವ್ ಅಗರ್ವಾಲ್, ಮಗುವಿನ ತಂದೆ ಪ್ರತಿ ತಿಂಗಳು ಖರ್ಚಿಗೆ ಅಲ್ಪ ಮೊತ್ತವನ್ನಾದರೂ ನೀಡಬೇಕು. ಮಗು ಪದವಿ ಗಳಿಸುವವರೆಗೂ ಈ ಕ್ರಮ ಮುಂದುವರಿಯಬೇಕು ಎಂದು ಹೇಳಿದ್ರು. ಈ ಸಲಹೆಯನ್ನ ಒಪ್ಪಿಕೊಂಡ ನ್ಯಾಯಪೀಠ ಜೀವನಾಂಶ ಪ್ರಮಾಣವನ್ನ 10 ಸಾವಿರ ರೂಪಾಯಿಗೆ ಇಳಿಸಿದೆ. ಹಾಗೂ ಪ್ರತಿ ಹಣಕಾಸು ವರ್ಷಕ್ಕೆ ಈ ಮೊತ್ತಕ್ಕೆ 1000 ರೂಪಾಯಿ ಸೇರಿಸುತ್ತಾ ಹೋಗಬೇಕು ಎಂದು ಹೇಳಿದೆ.
ಕರ್ನಾಟಕ ಆರೋಗ್ಯ ಇಲಾಖೆ ಸಿಬ್ಬಂದಿಯಾಗಿರುವ ವ್ಯಕ್ತಿ 1999ರಲ್ಲಿ ಮೊದಲ ವಿವಾಹವಾಗಿದ್ದರು. ಈ ದಂಪತಿ ಒಂದು ಗಂಡುಮಗುವನ್ನೂ ಹೊಂದಿದ್ದರು. ಆದರೆ ಮೊದಲ ಪತ್ನಿಯಿಂದ 2005ರಲ್ಲಿ ವಿಚ್ಛೇದನ ಪಡೆದಿದ್ದ. ಇದಾದ ಬಳಿಕ ಸೆಪ್ಟೆಂಬರ್ 2017ರಲ್ಲಿ ಕರ್ನಾಟಕ ಕೌಟುಂಬಿಕ ನ್ಯಾಯಾಲಯವು ಬಾಲಕನಿಗೆ ತಂದೆ 20 ಸಾವಿರ ರೂಪಾಯಿ ಜೀವನಾಂಶವನ್ನ ಪ್ರತಿ ತಿಂಗಳು ನೀಡಬೇಕು ಎಂದು ಹೇಳಿತ್ತು. ಆದರೆ ಈ ಆದೇಶದ ವಿರುದ್ಧ ತಂದೆ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಕೂಡ ಕುಟುಂಬ ನ್ಯಾಯಾಲಯದ ಆದೇಶವನ್ನ ಎತ್ತಿ ಹಿಡಿದಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿದಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ನಲ್ಲಿ ಅರ್ಜಿದಾರ ಪರ ವಕೀಲ ಮೊದಲ ಪತ್ನಿಗೆ ಅಕ್ರಮ ಸಂಬಂಧ ಇದ್ದ ಕಾರಣ ಕಕ್ಷಿದಾರ ವಿಚ್ಚೇದನ ನೀಡಿದ್ದರು ಎಂದು ಕೋರ್ಟ್ಗೆ ಹೇಳಿದ್ದಾರೆ.
ಆದರೆ ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಈ ಕಾರಣಕ್ಕಾಗಿ ಮಗುವಿಗೆ ಶಿಕ್ಷೆ ನೀಡೋದು ಸರಿ ಅಲ್ಲ. ಮಗುವಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಎರಡನೇ ಮದುವೆ ಆಗುವ ಮುನ್ನವೇ ನಾನು ಮೊದಲ ಮದುವೆಯಲ್ಲಿ ಜನಿಸಿದ ಮಗುವಿನ ಜವಾಬ್ದಾರಿ ಹೊರಬೇಕು ಎಂಬುದನ್ನ ತಲೆಯಲ್ಲಿ ಇಟ್ಟುಕೊಳ್ಳಬೇಕಿತ್ತು ಎಂದು ಹೇಳಿದೆ.