ಬೆಳಗಾವಿ: ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವ ಬೆನ್ನಲ್ಲೇ ಬೆಂಬಲಿಗರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಒಂದೆಡೆ ರಮೇಶ್ ಜಾರಕಿಹೊಳಿ ಸ್ವಕ್ಷೇತ್ರ ಬೆಳಗಾವಿ ಜಿಲ್ಲೆ ಗೋಕಾಕ್ ಬಂದ್ ಮಾಡಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಇನ್ನೊಂದೆಡೆ ಬೆಳಗಾವಿಯಲ್ಲಿಯೂ ಪ್ರತಿಭಟನೆಗಳು ಹೆಚ್ಚುತ್ತಿವೆ. ಸಿಡಿ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಮೇಶ್ ಬೆಂಬಲಿಗರು ಗೋಕಾಕ್ – ಧಾರವಾಡ ರಸ್ತೆ ತಡೆ ನಡೆಸಿದ್ದು, ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ರಮೇಶ್ ಬೆಂಬಲಿಗರಿಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಪೊಲೀಸರು ತಡೆದಿದ್ದಾರೆ.
ಇನ್ನೊಂದೆಡೆ ಗೋಕಾಕ್ ನಲ್ಲಿ ಕಾಲೇಜುಗಳನ್ನು ಮುಚ್ಚಲಾಗಿದ್ದು, ಸರ್ಕಾರಿ ಬಸ್ ಸಂಚಾರಕ್ಕೂ ತಡೆಯೊಡ್ಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಬಸ್ ಗಳಿಲ್ಲದೇ ಪರದಾಡುತ್ತಿದ್ದಾರೆ. ಇನ್ನು ಬೆಳಗಾವಿ ನಗರದಲ್ಲಿಯೂ ಪ್ರತಿಭಟನೆಗಳು ಹೆಚ್ಚುತ್ತಿದ್ದು, ಭದ್ರತೆಗಾಗಿ 3 ಕೆ.ಎಸ್.ಆರ್.ಪಿ. ತುಕಡಿ, 6 ಡಿಎಆರ್ ತುಕಡಿ, ನಾಲ್ವರು ಡಿ.ವೈ.ಎಸ್.ಪಿ., 10 ಸಿಪಿಐ ನಿಯೋಜಿಸಲಾಗಿದೆ.