ನವದೆಹಲಿ: ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಗುರುವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಫೇಸ್ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸುವುದು ಮಾಲ್ ಗಳು, ರೆಸ್ಟೋರೆಂಟ್ ಗಳು ಮತ್ತು ಧಾರ್ಮಿಕ ಸ್ಥಳಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಿಂದಿನ ಮಾರ್ಗಸೂಚಿಗಳನ್ನು ಸೇರಿಸಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶಾಪಿಂಗ್ ಮಾಲ್ ಗಳಿಗೆ ನಿರ್ದೇಶನ ನೀಡಲಾಗಿದೆ. ಕೆಲಸದ ಸ್ಥಳದಲ್ಲಿ ಉದ್ಯೋಗಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಲಾಗಿದೆ.
ಶಾಪಿಂಗ್ ಮಾಲ್ ಗಳಿಗೆ ಮಾರ್ಗಸೂಚಿ:
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು.
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಉದ್ಯೋಗಿಗಳು ನಿಯಮ ಪಾಲಿಸಬೇಕು.
ಕಾರ್ಮಿಕರು, ಗ್ರಾಹಕರು, ಸರಕುಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಮಾಡಬೇಕು.
ರೆಸ್ಟೊರೆಂಟ್ ಗಳಿಗೆ ಮಾರ್ಗಸೂಚಿ:
ಶಾಪಿಂಗ್ ಮಾಲ್ ಗಳ ಹೊರತಾಗಿ ರೆಸ್ಟೋರೆಂಟ್ ಗಳಲ್ಲಿ ಹೊಸ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಸರ್ಕಾರ ಸೂಚನೆ ನೀಡಿದೆ. ಮುನ್ನೆಚರಿಕೆ ಅನುಸರಿಸಿ ಆಹಾರ ವಿತರಣೆಯನ್ನು ಸರಿಯಾಗಿ ಮಾಡಬೇಕು. ಮನೆಗೆ ಆಹಾರ ವಿತರಿಸುವ ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಕೋವಿಡ್ ಮುನ್ನೆಚ್ಚರಿಕೆ ಅನುಸರಿಸಿ ಫುಡ್ ಡೆಲಿವರಿ ಮಾಡುವ ಬದಲು ಆಹಾರ ವಿತರಣೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಲಾಗಿದೆ.
ಮನೆ ವಿತರಣೆ ಸಿಬ್ಬಂದಿಗೆ ಅವರ ದೈಹಿಕ ಉಷ್ಣಾಂಶ ತಪಾಸಣೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಅನುಸರಿಸಬೇಕು. ವಾಹನ ನಿಲುಗಡೆ ಮತ್ತು ಆವರಣದ ಹೊರಗೆ ಜನ ಸೇರಿದಂತೆ ನೋಡಿಕೊಳ್ಳಬೇಕು. ಪ್ರವೇಶ ಮತ್ತು ರೆಸ್ಟೋರೆಂಟ್ ಒಳಗೆ ಸರದಿಯಲ್ಲಿರುವಾಗ ಆರು ಅಡಿಗಳ ಭೌತಿಕ ಅಂತರ ಕಾಪಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.
ಧಾರ್ಮಿಕ ಕೇಂದ್ರಗಳಲ್ಲಿ ಮಾರ್ಗಸೂಚಿ:
ಇನ್ನು ಕಡ್ಡಾಯವಾಗಿ ಕೈತೊಳೆಯುವುದು, ಥರ್ಮಲ್ ಸ್ಕ್ರೀನಿಂಗ್ ವಿಧಾನ ಅನುಸರಿಸುವುದು ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ತಿಳಿಸಲಾಗಿದೆ.
ಲಕ್ಷಣ ರಹಿತ ಜನರಿಗೆ ಮಾತ್ರ ಪ್ರವೇಶ ನೀಡಬೇಕು. ಫೇಸ್ ಮಾಸ್ಕ್ ಇಲ್ಲದವರಿಗೆ ಅವಕಾಶ ಕೊಡಬಾರದು. ಕಡ್ಡಾಯವಾಗಿ ಕೈತೊಳೆಯುವುದು, ಥರ್ಮಲ್ ಸ್ಕ್ರೀನಿಂಗ್ ವಿಧಾನವನ್ನು ಅನುಸರಿಸಬೇಕು ಎಂದು ತಿಳಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಕೊರೊನಾ ಸೋಂಕು ಕೆಲವು ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.