ನೌಕರರ ಭವಿಷ್ಯ ನಿಧಿ ಸಂಸ್ಥೆ ಇ ಪಿ ಎಫ್ ಒ 2020-21ರ ಬಡ್ಡಿ ದರವನ್ನು ಇಂದು ಪ್ರಕಟಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಬಡ್ಡಿ ದರ ಶೇಕಡಾ 8.3 ರಿಂದ ಶೇಕಡಾ 8.5 ರೊಳಗಿರಲಿದೆ ಎಂದು ಅಂದಾಜಿಸಲಾಗ್ತಿದೆ. ಗುರುವಾರ ಶ್ರೀನಗರದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಇಪಿಎಫ್ಒ ಕೇಂದ್ರ ಮಂಡಳಿ ಟ್ರಸ್ಟಿಗಳು ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಲಿದ್ದಾರೆ.
ಇಪಿಎಫ್ಒನ ಹಣಕಾಸು ಸಲಹಾ ಸಮಿತಿ ಬುಧವಾರ ಸಂಜೆ ಸಭೆ ನಡೆಸಿದೆ. ಕಳೆದ ವರ್ಷದಂತೆ ಶೇಕಡಾ 8.5ರ ಬಡ್ಡಿ ದರವನ್ನು ಉಳಿಸಿಕೊಳ್ಳುವಂತೆ ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ ಎನ್ನಲಾಗಿದೆ. 2019-20ರ ಬಡ್ಡಿ ಹಲವಾರು ಕಾರಣಗಳಿಗಾಗಿ ಸುದ್ದಿಯಲ್ಲಿತ್ತು. ಎರಡು ಕಂತಿನಲ್ಲಿ ಬಡ್ಡಿ ಪಾವತಿಗೆ ಒಪ್ಪಿಗೆ ನೀಡಲಾಗಿತ್ತು. ಆದ್ರೆ ಕೆವೈಸಿ ಹೊಂದಿಕೆಯಾಗದ ಕಾರಣ ಸುಮಾರು 4 ಮಿಲಿಯನ್ ಇಪಿಎಫ್ಒ ಚಂದಾದಾರರಿಗೆ ಸರಿಯಾದ ಸಮಯದಲ್ಲಿ ಇದನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.
2018-19ರಲ್ಲಿ ಬಡ್ಡಿದರ ಶೇಕಡಾ 8.65ರಷ್ಟಿತ್ತು. ಇಪಿಎಫ್ಒ ತನ್ನ ಚಂದಾದಾರರಿಗೆ 2017-18ನೇ ಸಾಲಿನಲ್ಲಿ ಶೇಕಡಾ 8.55ರಷ್ಟು ಬಡ್ಡಿ ದರವನ್ನು ನೀಡಿತ್ತು. ಬಡ್ಡಿದರ 2016-17ರಲ್ಲಿ ಶೇಕಡಾ 8.65ರಷ್ಟಿತ್ತು. ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಬಡ್ಡಿ ದರ ಕಡಿಮೆಯಾಗಲಿದೆ ಎಂದು ಮೂಲಗಳು ಹೇಳ್ತಿವೆ.