ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಆದಾಯ ಮಿತಿಯನ್ನು 12,000 ರೂ.ನಿಂದ 32 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
2011 ರಲ್ಲಿ ಬಡತನ ರೇಖೆಗಿಂತ ಕೆಳಗಿನವರನ್ನು ಗುರುತಿಸಲು ಆದಾಯಮಿತಿ ನಿಗದಿಗೊಳಿಸಿದ್ದ ಗ್ರಾಮೀಣ ಭಾಗದ ಫಲಾನುಭವಿಗಳಿಗೆ 12,000 ರೂ. ಹಾಗೂ ನಗರದ ಫಲಾನುಭವಿಗಳಿಗೆ 17,000 ರೂಪಾಯಿಗಳ ಆದಾಯ ಮಿತಿ ನಿಗದಿಪಡಿಸಲಾಗಿತ್ತು. ಈಗ ಆದಾಯ ಮಿತಿಯನ್ನು ಹೆಚ್ಚಳ ಮಾಡಲಾಗಿದೆ.
ಆಹಾರ ಇಲಾಖೆ ಬಿಪಿಎಲ್ ಪಡಿತರ ಚೀಟಿ ವಿತರಿಸಲು ಆದಾಯ ಮಿತಿಯನ್ನು ಏರಿಕೆ ಮಾಡಿದ್ದು, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಇದನ್ನು ಅನ್ವಯಿಸಲು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಇನ್ನಷ್ಟು ಫಲಾನುಭವಿಗಳಿಗೆ ಅನುಕೂಲವಾಗಲಿದೆ.
ಸಾಮಾಜಿಕ ಭದ್ರತಾ ಯೋಜನೆಯಡಿ ಕುಟುಂಬಗಳಿಗೆ ಪಿಂಚಣಿ ಸೌಲಭ್ಯ ಒದಗಿಸಲು ಆದಾಯ ಮಿತಿ ಹೆಚ್ಚಳ ಮಾಡಲಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದ ಫಲಾನುಭವಿಗಳ ಆದಾಯ ಮಿತಿಯನ್ನು 32 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಇದರಿಂದಾಗಿ ವೃದ್ಧಾಪ್ಯವೇತನ, ವಿಧವಾ ವೇತನ, ವಿಕಲಚೇತನರ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ, ಮೈತ್ರಿ ಯೋಜನೆಯಡಿ ಮಾಸಾಶನ ಪಡೆಯುವ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದರೊಂದಿಗೆ ಒಂದೇ ಸಲ ಸಹಾಯಧನ ನೀಡಲಿರುವ ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂತ್ಯಸಂಸ್ಕಾರ ಸಹಾಯಧನ ಯೋಜನೆಗಳಿಗೂ ಈ ಆದಾಯ ಮಿತಿ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.