ಮೈಸೂರು: ಪರ ಸತಿ, ಪರ ಧನ, ಪರದೇಶಿ ಮಧ್ಯೆ ರಾಜಕಾರಣ ಓಡಾಟ ನಡೆಯುತ್ತಿದೆ ಎಂದು ಸೆಕ್ಸ್ ಸಿಡಿ ಘಟನೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಗಿ ವಿಮರ್ಶಿಸಿದ್ದಾರೆ.
ರಾಸಲೀಲೆ, ರಸಲೀಲೆ, ಕರ್ಮಕಾಂಡದ ಮಧ್ಯೆ ರಾಜಕಾರಣ ಇದೆ. ನತದೃಷ್ಟ ಮುಖ್ಯಮಂತ್ರಿ ಸಿಕ್ಕಿರುವುದು ರಾಜ್ಯಕ್ಕೆ ದುರ್ದೈವ. ಮುಖ್ಯಮಂತ್ರಿಗೆ ತಕ್ಕನಾದ ಸಹಪಾಠಿ ಮಂತ್ರಿ, ಅದಕ್ಕೊಂದು ಪಾರ್ಟಿ. ಇವರ ನಡುವೆ ಸಿಲುಕಿ ಕೇಶವಕೃಪಾ, ಬಸವ ಕೃಪಾ ಒದ್ದಾಡುತ್ತಿವೆ. ಇದು ದಿಕ್ಕುತಪ್ಪಿದ ರಾಜಕಾರಣ ಎಂದು ಹೇಳಿದ್ದಾರೆ.
ಹಿಂದೆ ಜನ ಮತ ಕೊಡಲು ಕುಲಕಸುಬು ನೋಡುತ್ತಿದ್ದರು. ಎತ್ತು ತೆಗೆದುಕೊಳ್ಳುವಾಗಲೂ ತಳಿ ಯಾವುದೆಂದು ನೋಡುತ್ತೇವೆ. ಕುದುರೆಗೆ ರೇಸ್ ನಲ್ಲಿ ದುಡ್ಡು ಕಟ್ಟುವ ಮೊದಲು ಅದರ ಅಪ್ಪ-ಅಮ್ಮ, ಅದು ಮೊದಲಿಗೆ ಎಷ್ಟು ರೇಸ್ ಗೆದ್ದಿದೆ ಎನ್ನುವುದನ್ನು ನೋಡುತ್ತೇವೆ. ಈಗಿನ ರೇಸ್ ಗಳು ಎಷ್ಟು ದುಡ್ಡು ತಂದಿದ್ದಾರೆ ಎಂದು ನೋಡುತ್ತಾರೆ. ಈಗಿನ ರಾಜಕಾರಣ ಹಾಳಾಗಿ ಹೋಗಿದೆ. ಸರಿಯಾಗುತ್ತದೆ ಎಂಬ ನಂಬಿಕೆ ಇಲ್ಲ. ದೊಡ್ಡ ಕ್ರಾಂತಿ ಆಗಬೇಕಿದೆ. ಕ್ರಾಂತಿ ಆಗುತ್ತದೆ ಎನ್ನುವ ನಂಬಿಕೆಯಂತೂ ಇದೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.