ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಬಹಿರಂಗವಾಗಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಸ್ಠಿಸಿದೆ. ಇದರಿಂದಾಗಿ ಮುಜುಗರಕ್ಕೆ ಒಳಗಾದ ರಮೇಶ್ ಜಾರಕಿಹೊಳಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಅವರಿಂದ ರಾಜೀನಾಮೆ ಪಡೆಯುವ ಕುರಿತಾಗಿ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಇದರ ಬೆನ್ನಲ್ಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಮೇಶ್ ಜಾರಕಿಹೊಳಿ ಅವರ ಜೊತೆಗೆ ನಿಂತಿದ್ದಾರೆ.
ಅದು ನಕಲಿ ಸಿಡಿಯಾಗಿದ್ದು, 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ವಿಡಿಯೋ ಬಹಿರಂಗವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಯೂಟ್ಯೂಬ್ನಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ. ಇದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸಿಎಂಗೆ ಮನವಿ ಮಾಡಲಾಗಿದೆ. ಈ ರೀತಿಯಾದರೆ ರಾಜಕಾರಣ ಮಾಡುವುದು ಕಷ್ಟವಾಗುತ್ತದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಇದೊಂದು ಸೃಷ್ಟಿ ಮಾಡಿರುವಂತಹ ನಕಲಿ ಸಿಡಿ ಆಗಿದೆ. ರಮೇಶ್ ಜಾರಕಿಹೊಳಿ ಅವರೊಂದಿಗೆ ನಾವೆಲ್ಲರೂ ಜೊತೆಗಿರುತ್ತೇವೆ. ಸಿಬಿಐ ತನಿಖೆಗೆ ನೀಡುವಂತೆ ಸಿಎಂಗೆ ಒತ್ತಾಯ ಮಾಡಲಾಗಿದೆ. ನಕಲಿ ಸಿಡಿಗಾಗಿ ರಾಜೀನಾಮೆ ನೀಡಿದಲ್ಲಿ ಸಚಿವ ಸಂಪುಟವೇ ಖಾಲಿಯಾಗುತ್ತೆ. ಜಾರಕಿಹೊಳಿ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಜಾರಕಿಹೊಳಿ ಕುಟುಂಬದ ವಿರುದ್ಧ ಕಾಣದ ಶಕ್ತಿಗಳು ನಮ್ಮ ಹಿಂದೆ ಷಡ್ಯಂತ್ರ ಮಾಡುತ್ತಿವೆ. ಇಂದು ಮಧ್ಯಾಹ್ನವೇ ರಮೇಶ್ ಜಾರಕಿಹೊಳಿ ಸಿಎಂ ಭೇಟಿಯಾಗಲಿದ್ದಾರೆ. ಅಗತ್ಯವಾದರೆ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಾವೆಲ್ಲರೂ ಅವರ ಬೆಂಬಲವಾಗಿ ನಿಲ್ಲುತ್ತೇವೆ. ಬಿಜೆಪಿ ಎಲ್ಲಾ ಶಾಸಕರು ರಮೇಶ್ ಗೆ ಬೆಂಬಲವಾಗಿ ಇರುತ್ತೇವೆ. ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ನಾವು ಸುಮ್ಮನೆ ಕುಳಿತರೆ ಆಗಲ್ಲ. ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.