ದೇಶದಾದ್ಯಂತ ಈಗ ಕೊರೊನಾ ಲಸಿಕೆ ಮೂರನೇ ಹಂತದ ಅಭಿಯಾನ ನಡೆಯುತ್ತಿದೆ. ಸೋಮವಾರದಿಂದ ಆರಂಭವಾಗಿರುವ ಈ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ ತೀವ್ರತರವಾದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಈಗಾಗಲೇ ಲಸಿಕೆ ಪಡೆದುಕೊಂಡಿದ್ದು, ಸಾರ್ವಜನಿಕರು ಸಹ ಲಸಿಕೆ ಪಡೆದುಕೊಳ್ಳುವ ಮೂಲಕ ಕೊರೊನಾದಿಂದ ಸುರಕ್ಷತೆ ಹೊಂದುವಂತೆ ಮನವಿ ಮಾಡಿದ್ದಾರೆ.
ಕೊರೊನಾ ಲಸಿಕೆ ಈವರೆಗೆ ಸಾರ್ವಜನಿಕ ಆಸ್ಪತ್ರೆ ಹಾಗೂ ಗುರುತಿಸಿದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದ್ದು, ಇದೀಗ ಸಾರ್ವಜನಿಕರಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ದೇಶದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕಾ ಕೇಂದ್ರ ತೆರೆಯುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಖಾಸಗಿ ಆಸ್ಪತ್ರೆಗಳಲ್ಲಿ 250 ರೂ. ಶುಲ್ಕ ಪಾವತಿಸಿ ಸಾರ್ವಜನಿಕರು ಕೊರೊನಾ ಲಸಿಕೆ ಪಡೆಯಬಹುದಾಗಿದೆ.3ನೇ ಹಂತದ ಲಸಿಕೆ ಅಭಿಯಾನಕ್ಕೆ ಕೇವಲ 48 ಗಂಟೆಗಳ ಅವಧಿಯಲ್ಲಿ 50 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.