ಎರಡು ದಿನಗಳ ಹಿಂದಷ್ಟೇ ತವರು ಜಿಲ್ಲೆ ಶಿವಮೊಗ್ಗದಲ್ಲಿ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಸಂದಿಗ್ಧತೆಗೆ ಸಿಲುಕಿದ್ದಾರೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರಾಗಿದ್ದ ಸಚಿವ ರಮೇಶ್ ಜಾರಕಿಹೊಳಿಯವರ ರಾಜೀನಾಮೆ ಪಡೆಯುವ ಅನಿವಾರ್ಯತೆಯಲ್ಲಿ ಮುಖ್ಯಮಂತ್ರಿಗಳಿದ್ದಾರೆ.
ಯುವತಿಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವ ಆಮಿಷ ಒಡ್ಡಿ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಪೂರಕವಾಗಿ ಸಿಡಿ ಹಾಗೂ ಆಡಿಯೋ ಬಹಿರಂಗವಾಗಿದೆ. ಜೊತೆಗೆ ಪೊಲೀಸ್ ಠಾಣೆಯಲ್ಲೂ ಸಹ ದೂರು ದಾಖಲಾಗಿದ್ದು, ಇದರ ಮಧ್ಯೆ ಮೈಸೂರಿನಲ್ಲಿದ್ದ ರಮೇಶ್ ಜಾರಕಿಹೊಳಿ ಯಾರ ಕೈಗೂ ಸಿಗದೆ ಅಜ್ಞಾತಸ್ಥಳಕ್ಕೆ ಚೆಲ್ಲಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರಕ್ಕೆ ಕಂಟಕವಾಗುತ್ತಾ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ…?
ಇದರ ಮಧ್ಯೆ ರಾಜ್ಯದ ಹಲವು ಕಡೆ ಪ್ರತಿಪಕ್ಷ ಕಾಂಗ್ರೆಸ್ ಕಾರ್ಯಕರ್ತರು, ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಜೊತೆಗೆ ಸ್ವಪಕ್ಷೀಯ ಬಿಜೆಪಿಯ ಹಲವು ಮಂದಿ, ಸಚಿವ ರಮೇಶ್ ಜಾರಕಿಹೊಳಿಯವರಿಂದ ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿದ್ದಾರೆನ್ನಲಾಗಿದೆ.
ಈ ಹಿಂದೆಯೂ ಸಹ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿದ್ದ ಎಚ್.ವೈ. ಮೇಟಿ ಅವರ ರಾಸಲೀಲೆ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಸಿದ್ದರಾಮಯ್ಯನವರು ಅವರಿಂದ ರಾಜಿನಾಮೆ ಪಡೆದುಕೊಂಡಿದ್ದು, ಅದೇ ನಿಲುವನ್ನು ಅನುಸರಿಸುವಂತೆ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಲಾಗಿದೆ.