ದೇಶಾದ್ಯಂತ ಮೂರನೇ ಹಂತದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಆಸ್ಪತ್ರೆಗೆ ತೆರಳಿ ಕೊರೊನಾ ಮಾರ್ಗಸೂಚಿ ಪ್ರಕಾರ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್ ಕೊರೊನಾ ಲಸಿಕೆ ಮಾರ್ಗಸೂಚಿ ಉಲ್ಲಂಘಿಸಿದ್ದು, ಹಿರೇಕೆರೂರಿನ ತಮ್ಮ ಮನೆಗೇ ಆಸ್ಪತ್ರೆ ಸಿಬ್ಬಂದಿಗಳನ್ನು ಕರೆಸಿ ಲಸಿಕೆ ಹಾಕಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ದೇಶದ ಪ್ರಧಾನಿ ಮೋದಿ, ಹಲವು ಸಚಿವರುಗಳು ಅಷ್ಟೇ ಅಲ್ಲ, ವೃದ್ಧರು ಕೂಡ ಈಗಾಗಲೇ ಆಸ್ಪತ್ರೆಗಳಿಗೆ ತೆರಳಿ, ಗಂಟೆಗಟ್ಟಲೇ ಕಾದು ಕೊರೊನಾ ವ್ಯಾಕ್ಸಿನ್ ಪಡೆಯುವ ಮೂಲಕ ಮಾದರಿಯಾಗಿದ್ದಾರೆ. ಓರ್ವ ಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ಮಾರ್ಗಸೂಚಿ ಪಾಲನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದವರು ಇದೀಗ ಬೇಜವಾಬ್ದಾರಿ ಮೆರೆಯುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕೊರೊನಾ ಲಸಿಕೆ ಪಡೆದುಕೊಳ್ಳುವವರು ಆನ್ ಲೈನ್ ನಲ್ಲಿ ನೋಂದಣಿ ಮಾಡಿ ನಿಗದಿತ ಆಸ್ಪತ್ರೆಗೆ ತೆರಳಿ ವ್ಯಾಕ್ಸಿನ್ ಪಡೆಯಬೇಕು. ಬಳಿಕ ಅರ್ಧಗಂಟೆ ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿರಬೇಕು. ಆದರೆ ಕೃಷಿ ಸಚಿವರು ಆಸ್ಪತ್ರೆ ಸಿಬ್ಬಂದಿಯನ್ನು ಮನೆಗೆ ಕರೆಸಿ ತಾವು ಲಸಿಕೆ ಪಡೆಯುವುದಲ್ಲದೇ ತಮ್ಮ ಪತ್ನಿಗೂ ಲಸಿಕೆ ಕೊಡಿಸುವ ಮೂಲಕ ವಿವಿಐಪಿ ದರ್ಬಾರ್ ನಡೆಸಿದ್ದಾರೆ.