ರೈತರಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದ್ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಕೂಡ ಒಂದು. ಈ ಯೋಜನೆಯಲ್ಲಿ ಕೃಷಿ ಕೆಲಸಕ್ಕಾಗಿ ರೈತರಿಗೆ ಕೈಗೆಟುಕುವ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಈವರೆಗೂ ಮಾಡಿಲ್ಲ ಎನ್ನುವವರಿಗೆ ಮೋದಿ ಸರ್ಕಾರ ಮತ್ತೊಂದು ಅವಕಾಶ ನೀಡ್ತಿದೆ. ಮಾರ್ಚ್ 31ರವರೆಗೆ ಅಭಿಯಾನ ನಡೆಸುತ್ತಿದ್ದು, ನೀವೂ ಇದ್ರಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಿಕೊಳ್ಳಿ.
ಯೋಜನೆಯಡಿಯಲ್ಲಿ ಯಾವುದೇ ರೈತರು ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಅರ್ಜಿ ಭರ್ತಿ ಮಾಡಿದ ನಂತರ ಕೇವಲ 15 ದಿನಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ನಿಮ್ಮ ಕೈ ಸೇರುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ತೆಗೆದುಕೊಂಡ ಸಾಲದ ಮೇಲೆ 3 ಲಕ್ಷ ರೂಪಾಯಿಗಳವರೆಗೆ ಸೇವಾ ಶುಲ್ಕವನ್ನು ಮನ್ನಾ ಮಾಡಲಾಗಿದೆ. 3 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ ಶೇಕಡಾ 7 ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸಾಲವನ್ನು ಹಿಂದಿರುಗಿಸುವ ರೈತರಿಗೆ ಶೇಕಡಾ 3 ರಷ್ಟು ರಿಯಾಯಿತಿ ಸಿಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಪಿಎಂ ಕಿಸಾನ್ ಯೋಜನೆಯ ಅಧಿಕೃತ ಸೈಟ್ pmkisan.gov.in. ಗೆ ಹೋಗಬೇಕು. ಅಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಫಾರ್ಮ್ ಡೌನ್ಲೋಡ್ ಮಾಡಿ. ಕೃಷಿಯೋಗ್ಯ ಭೂಮಿಯ ದಾಖಲೆಗಳು, ಬೆಳೆಯ ವಿವರಗಳೊಂದಿಗೆ ಫಾರ್ಮ್ ಭರ್ತಿ ಮಾಡಬೇಕು. ಅಲ್ಲದೆ ಬೇರೆ ಯಾವುದೇ ಬ್ಯಾಂಕ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಇಲ್ಲ ಎನ್ನುವುದನ್ನು ತಿಳಿಸಬೇಕು. ಆನ್ಲೈನ್ ನಲ್ಲಿ ಫಾರ್ಮ್ ಭರ್ತಿ ಸಾಧ್ಯವಾಗದವರು ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಭರ್ತಿ ಮಾಡಬಹುದು.
ಇದಕ್ಕೆ ಮತದಾರರ ಕಾರ್ಡ್, ಪಾನ್ ಕಾರ್ಡ್, ಪಾಸ್ಪೋರ್ಟ್, ಆಧಾರ್ ಕಾರ್ಡ್, ಚಾಲನಾ ಪರವಾನಗಿಯಲ್ಲಿ ಒಂದನ್ನು ಐಡಿ ಪ್ರೂಫ್ ಆಗಿ ನೀಡಬೇಕು. ಕಿಸಾನ್ ಕ್ರೆಡಿಟ್ ಕಾರ್ಡನ್ನು ಸಹಕಾರಿ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನಿಂದ ಪಡೆಯಬಹುದು.
ಇದು ಕೃಷಿಗೆ ಮಾತ್ರ ಸೀಮಿತವಾಗಿಲ್ಲ. ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಇದರ ಅಡಿಯಲ್ಲಿ 2 ಲಕ್ಷ ರೂಪಾಯಿಗಳ ಸಾಲ ಪಡೆಯಬಹುದು. ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 75 ವರ್ಷಗಳು. ನಿಗದಿತ ಅವಧಿಯೊಳಗೆ ಕಾರ್ಡ್ ಸಿಗದಿದ್ದರೆ ರೈತರು ಸಂಬಂಧಪಟ್ಟ ಪ್ರದೇಶದ ಬ್ಯಾಂಕಿಗೆ ದೂರು ನೀಡಬಹುದು.