ರಾಯಚೂರು ಜಿಲ್ಲೆಯ ಜಾಗಿರ ವೆಂಕಟಾಪುರ ಗ್ರಾಮದ ನಿವಾಸಿಗಳಾದ ಯುವಕ ಮತ್ತು ಅಪ್ರಾಪ್ತೆ ಪ್ರೀತಿಸಿದ್ದು ಮಾನಕ್ಕೆ ಹೆದರಿ ವಿಷ ಸೇವಿಸಿದ್ದಾರೆ. ಪ್ರಿಯಕರ ಮೃತಪಟ್ಟಿದ್ದು, ಪ್ರೇಯಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.
ರಾಯಚೂರಿನಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಯುವಕ ಚಿಕ್ಕಮ್ಮನ ಮಗಳನ್ನು ಪ್ರೀತಿಸಿದ್ದು, ಅಪ್ರಾಪ್ತೆ ಅಣ್ಣನ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಅಣ್ಣ-ತಂಗಿ ಆಗಬೇಕಿದ್ದ ಕಾರಣ ಬಾಲಕಿಯನ್ನು ಯುವಕ ಆಗಾಗ ಹೊರಗೆ ಕರೆದುಕೊಂಡು ಹೋಗುತ್ತಿದ್ದರೂ ಯಾರಿಗೂ ಅನುಮಾನ ಇರಲಿಲ್ಲ ಎನ್ನಲಾಗಿದೆ.
ಇವರ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿದೆ. ಸಂಬಂಧದಲ್ಲಿ ಅಣ್ಣ-ತಂಗಿ ಆಗಬೇಕಿದ್ದ ಇವರು ಪ್ರೀತಿಸಿದ ವಿಚಾರ ಊರಿನವರಿಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಭಾವಿಸಿ ದೇವದುರ್ಗ ತಾಲೂಕಿನ ನಾರಾಯಣಪುರ ಕಾಲುವೆ ಸಮೀಪ ವಿಷ ಸೇವಿಸಿದ್ದಾರೆ. ಯುವಕ ಮೃತಪಟ್ಟಿದ್ದು, ಬಾಲಕಿಯನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಬ್ಬೂರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ಹೇಳಲಾಗಿದೆ.