ಬ್ಯಾಂಕುಗಳು ಗ್ರಾಹಕರಿಗೆ ಪರೋಕ್ಷವಾಗಿ ಸುಲಿಗೆ ಮಾಡುತ್ತಿವೆ. ಸದ್ದೇ ಇಲ್ಲದೆ ಗ್ರಾಹಕರು ತಮ್ಮ ಖಾತೆಯಿಂದ ಹಣ ಕಳೆದುಕೊಳ್ಳುತ್ತಿದ್ದಾರೆ. ಬ್ಯಾಂಕುಗಳ ನಿಯಮಗಳಲ್ಲಿ ಅನೇಕ ಬದಲಾವಣೆಗಳಾಗಿದ್ದರೂ ಈ ಬಗ್ಗೆ ಬಹುತೇಕ ಗ್ರಾಹಕರಿಗೆ ಗೊತ್ತೇ ಇರಲ್ಲ.
ಅನೇಕ ರೀತಿಯ ಶುಲ್ಕ ಮತ್ತು ಫೈನ್ ಗಳನ್ನು ಬ್ಯಾಂಕುಗಳು ವಿಧಿಸುತ್ತಿವೆ. ಬಹುತೇಕ ಗ್ರಾಹಕರಿಗೆ ಇದರ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಖಾತೆಯಲ್ಲಿ ಹಣವಿಲ್ಲದ ಸಂದರ್ಭದಲ್ಲಿ ಅಥವಾ ನಿಗದಿತ ಮೊತ್ತ ಇಲ್ಲದಿದ್ದಾಗ ನೀವು ಹಣ ಪಾವತಿಗೆ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದರೆ ಒಂದು ಟ್ರಾನ್ಸಾಕ್ಷನ್ ಗೆ 29 ರೂಪಾಯಿ ನಿಮಗೆ ಗೊತ್ತಿಲ್ಲದೇ ಕಡಿತವಾಗುತ್ತದೆ.
ಒಂದೊಮ್ಮೆ ಹಣ ಪಾವತಿಯಾಗುತ್ತಿಲ್ಲ ಎಂದು ನೀವು ಮೂರ್ನಾಲ್ಕು ಸಲ ಕಾರ್ಡ್ ಸ್ವೈಪ್ ಮಾಡಿದರೆ ಅಷ್ಟು ಸಲ ನಿಮ್ಮ ಖಾತೆಯಿಂದ ತಲಾ 29 ರೂ. ನಷ್ಟು ಹಣ ಕಡಿತವಾಗುತ್ತದೆ. ಒಂದೊಮ್ಮೆ 10 ಸಲ ಕಾರ್ಡ್ ಸ್ವೈಪ್ ಮಾಡಿದರೆ 290 ರೂಪಾಯಿಯಷ್ಟು ಕಡಿತವಾಗುತ್ತದೆ ಎನ್ನಲಾಗಿದೆ.
ಕೆಲವೊಮ್ಮೆ ನೆಟ್ವರ್ಕ್ ಇಲ್ಲದ ಸಂದರ್ಭದಲ್ಲಿಯೂ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದಾಗ ಹಣ ಪಾವತಿ ಪ್ರಕ್ರಿಯೆ ವಿಫಲವಾದಾಗ ಕೂಡ ದಂಡ ವಿಧಿಸಲಾಗುತ್ತದೆ. ಎಟಿಎಂಗಳಲ್ಲಿಯೂ ಕೂಡ ಇದೇ ರೀತಿ ಪರೋಕ್ಷವಾಗಿ ಗ್ರಾಹಕರಿಗೆ ಗೊತ್ತೇ ಆಗದೆ ಶುಲ್ಕ, ಸೇವೆ ಹೆಸರಲ್ಲಿ ಗ್ರಾಹಕರ ಖಾತೆಯಿಂದ ಹಣ ಕಡಿತವಾಗುತ್ತದೆ.
ನಿಮ್ಮ ಖಾತೆಯಿಂದ ಶುಲ್ಕ ಅಥವಾ ದಂಡ ಕಡಿತವಾದ ಬಗ್ಗೆ ಮೆಸೇಜ್ ಬರುವುದಿಲ್ಲ. ನೀವು ಪಾವತಿಸಿದ, ಪಡೆದುಕೊಂಡ ಮೊತ್ತದ ಬಗ್ಗೆ ಮಾತ್ರ ಮೆಸೇಜ್ ಬರುತ್ತದೆ. ನಿಮ್ಮ ಖಾತೆ ಸ್ಟೇಟ್ಮೆಂಟ್ ನೋಡಿದಾಗ ಮಾತ್ರ ಸರ್ವೀಸ್ ಹೆಸರಲ್ಲಿ ಶುಲ್ಕ ಕಡಿತವಾಗಿರುವುದು ಗೊತ್ತಾಗುತ್ತದೆ. ಹೆಚ್ಚಿನ ಗ್ರಾಹಕರು ಸ್ಟೇಟ್ ಮೆಂಟ್ ನೋಡಲ್ಲ. ಮೊಬೈಲ್ ಗೆ ಬರುವ ಮೆಸೇಜ್ ಮಾತ್ರ ನೋಡ್ತಾರೆ. ಹೀಗೆ ಗ್ರಾಹಕರಿಗೆ ಗೊತ್ತೇ ಆಗದಂತೆ ಕೆಲವು ಬ್ಯಾಂಕುಗಳು ಸುಲಿಗೆ ಮಾಡುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.