ಮಹಾರಾಷ್ಟ್ರದ ನಾಗಪುರದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಬ್ಲ್ಯಾಕ್ ಮಾಜಿಕ್ ಹೆಸರಿನಲ್ಲಿ 50 ಕೋಟಿ ರೂಪಾಯಿ ಸಿಗುತ್ತೆ ಎಂದು ಬಾಲಕಿಗೆ ಆಮಿಷವೊಡ್ಡಿದ್ದಾರೆ. ಹಾಗೂ ಮಾಟ ಮಂತ್ರದ ಹೆಸರಿನಲ್ಲಿ ಬಾಲಕಿಯ ಬಟ್ಟೆ ತೆಗೆಯುವ ಪ್ರಯತ್ನ ಮಾಡಿದ್ದಾರೆ.
ಆದರೆ ಆಕೆಯ ಒಂದು ದಿಟ್ಟ ಹೆಜ್ಜೆ ವರದಾನವಾಗಿ ಪರಿಣಮಿಸಿದ್ದು, ಪ್ರಕರಣ ಸಂಬಂಧ ಐವರು ಆರೋಪಿಗಳನ್ನ ಜೈಲಿಗಟ್ಟಲಾಗಿದೆ. ಬಾಲಕಿ ಕೊನೆಯ ಕ್ಷಣದಲ್ಲಿ ದಿಟ್ಟತನ ತೋರಿದ ಪರಿಣಾಮ ದುರಂತ ನಡೆಯೋದು ತಪ್ಪಿದೆ.
ಬಾಲಕಿ ನೀಡಿರುವ ಮಾಹಿತಿ ಪ್ರಕಾರ, ಕೆಲ ದಿನಗಳ ಹಿಂದೆ ಈಕೆ ಈ ಆರೋಪಿಗಳಲ್ಲಿ ಒಬ್ಬನನ್ನ ಭೇಟಿಯಾಗಿದ್ದಳು. ಆತ ಈಕೆಯನ್ನ ಶ್ರೀಮಂತೆಯನ್ನಾಗಿ ಮಾಡುವ ಆಮೀಷವೊಡ್ಡಿದ್ದ ಹಾಗೂ ಇದಕ್ಕಾಗಿ ಆಕೆಯ ಮುಂದೆ ಕೆಲ ಷರತ್ತುಗಳನ್ನ ವಿಧಿಸಲಾಗಿತ್ತು.
ನೀನು ಈ ಎಲ್ಲಾ ಷರತ್ತುಗಳನ್ನ ಪಾಲಿಸಿದ್ರೆ ಮಾತ್ರ ಶ್ರೀಮಂತೆಯಾಗಲು ಸಾಧ್ಯ ಎಂದು ಪುಸಲಾಯಿಸಲಾಗಿತ್ತು. 50 ಕೋಟಿ ರೂಪಾಯಿ ಸಿಗುತ್ತೆ ಎಂಬ ಆಸೆಯಿಂದ ಆಕೆ ಕೂಡ ಆರೋಪಿಗಳ ಬಣ್ಣದ ಮಾತನ್ನ ನಂಬಿಕೊಂಡಿದ್ದಳು. ಆದರೆ ಯಾವಾಗ ಆರೋಪಿಗಳು ಬಟ್ಟೆ ಕಳಚುವಂತೆ ಹೇಳಿದ್ರೋ ಆಗ ಬಾಲಕಿಗೆ ಅನುಮಾನ ಶುರುವಾಗಿದೆ. ಆರೋಪಿಗಳು ಬೆತ್ತಲೆಯಾಗು ಎಂದು ಒತ್ತಡ ಹೇರಿದ್ರೂ ಸಹ ಆಕೆ ಆ ಮಾತನ್ನ ಕಡೆಗಣಿಸುತ್ತಲೇ ಬಂದಿದ್ದಳು.
ಆಕೆ ಆರೋಪಿಗಳ ಮಾತನ್ನ ಕಡೆಗಣಿಸಿದ್ರೂ ಸಹ ಆರೋಪಿಗಳು ಆಕೆಯ ಮೇಲೆ ಒತ್ತಡ ಹೇರುತ್ತಲೇ ಹೋಗಿದ್ದಾರೆ. ಇದಾದ ಬಳಿಕ ಎಚ್ಚೆತ್ತ ಬಾಲಕಿ ಪೊಲೀಸ್ ಠಾಣೆಗೆ ಹೋಗಿ ದೂರನ್ನ ನೀಡಿದ್ದಾಳೆ. ಈ ಸಂಬಂಧ ತನಿಖೆ ಕೈಗೊಂಡ ಲಕಡಗಂಜ್ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.