ಮಂಗಳೂರು: ತಂದೆ ಸಾವಿನ ನೋವಲ್ಲೂ ವೈದ್ಯರೊಬ್ಬರು ಇಬ್ಬರ ಜೀವ ಉಳಿಸುವ ಮೂಲಕ ವೃತ್ತಿಯ ಸಾರ್ಥಕತೆ ಮೆರೆದಿದ್ದಾರೆ.
ಮಂಗಳೂರಿನ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ತಂದೆಯ ಸಾವಿನ ನೋವಿನಲ್ಲೂ ಇಬ್ಬರ ಜೀವ ಉಳಿಸಿದ್ದಾರೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿರುವ ಪದ್ಮನಾಭ ಕಾಮತ್ ಫೆಬ್ರವರಿ 26 ರಂದು ರಾತ್ರಿ ರೋಗಿಗಳ ಪರೀಕ್ಷೆ ಮಾಡುತ್ತಿದ್ದ ವೇಳೆ ಅವರ ತಂದೆ ಡಾ. ಮಂಜುನಾಥ ಕಾಮತ್ ದೇಹಸ್ಥಿತಿ ಗಂಭೀರವಾಗಿರುವ ಬಗ್ಗೆ ಕರೆ ಬಂದಿದೆ. ಕೂಡಲೇ ಅಲ್ಲಿಗೆ ತೆರಳಿದ ಪದ್ಮನಾಭ ಕಾಮತ್ ತುರ್ತು ಚಿಕಿತ್ಸೆ ನೀಡಿದರೂ ಅವರ ತಂದೆ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಲೇರಿಯಾ ಮಾಜಿ ಅಧಿಕಾರಿಯಾಗಿದ್ದ ಡಾ. ಮಂಜುನಾಥ ಕಾಮತ್ ವಯೋಸಹಜವಾಗಿ ತೀರಿಕೊಂಡಿದ್ದಾರೆ.
ತಂದೆಯ ಮೃತದೇಹವನ್ನು ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಿದ ಪದ್ಮನಾಭ ಕಾಮತ್ ಅವರು ಮೃತದೇಹ ಹಸ್ತಾಂತರಕ್ಕೆ ಇನ್ನೂ ಸಮಯವಿದ್ದ ಕಾರಣ ತುರ್ತು ಅಗತ್ಯವಿದ್ದ ಹೃದ್ರೋಗಿ ಒಬ್ಬರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಆಸ್ಪತ್ರೆಯಿಂದ ತುರ್ತುಚಿಕಿತ್ಸೆಗೆ ಕರೆ ಬಂದಿದ್ದು ಅಲ್ಲಿಗೆ ತೆರಳಿದ ಪದ್ಮನಾಭ ಕಾಮತ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಫೆಬ್ರವರಿ 27 ರಂದು ಅವರ ತಂದೆಯ ಅಂತ್ಯಕ್ರಿಯೆ ನಡೆಯುವಾಗ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರಿಂದ ಪದೇಪದೇ ಫೋನ್ ಕರೆ ಬಂದಿದೆ. ಕರೆ ಸ್ವೀಕರಿಸಿದಾಗ ಆಸ್ಪತ್ರೆಯ ಅಡುಗೆ ಸಿಬ್ಬಂದಿಗೆ ತೀವ್ರ ಹೃದಯಾಘಾತವಾಗಿರುವುದು ಗೊತ್ತಾಗಿದೆ. ಕೂಡಲೇ ಆಸ್ಪತ್ರೆಗೆ ತೆರಳಿದ ಪದ್ಮನಾಭ ಕಾಮತ್ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಈ ಮೂಲಕ ತಂದೆಯ ಸಾವಿನ ನೋವಲ್ಲೂ ಇಬ್ಬರ ಜೀವ ಉಳಿಸಿದ್ದು, ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.