ಚಂಡೀಗಢ: ವಿವಾದಿತ ಕೃಷಿ ಕಾನೂನು ಮತ್ತು ಇಂಧನ ಬೆಲೆ ಏರಿಕೆ ವಿರೋಧಿಸಿ ಹರಿಯಾಣದ ಖಾಪ್ ಪಂಚಾಯಿತಿಗಳಿಂದ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. ಇಂದಿನಿಂದ ಸರ್ಕಾರಿ ಸಹಕಾರಿ ಸಂಘಗಳಿಗೆ ಒಂದು ಲೀಟರ್ ಹಾಲನ್ನು 100 ರೂಪಾಯಿಗೆ ಮಾರಾಟ ಮಾಡುವುದಾಗಿ ಖಾಪ್ ಪಂಚಾಯಿತಿ ನಾಯಕರು ಘೋಷಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಭಾರಿ ಏರಿಕೆಯಾಗಿರುವುದನ್ನು ವಿರೋಧಿಸಿ ಮತ್ತು ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಸ್ಸಾರ್ ನಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಇಂಧನ ಬೆಲೆ ಏರಿಕೆಯಿಂದ ಎರಡು ಪ್ರಮುಖ ಕಾರಣಗಳಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಉತ್ಪಾದನೆ ಕಡಿಮೆ ಮಾಡಿ ಹೆಚ್ಚಿನ ಲಾಭಗಳಿಸಲು ಉತ್ಪಾದಿತ ರಾಷ್ಟ್ರಗಳು ಮುಂದಾಗಿದ್ದು, ಕಡಿಮೆ ಇಂಧನ ಉತ್ಪಾದಿಸುತ್ತಿವೆ. ಇದರಿಂದಾಗಿ ಗ್ರಾಹಕ ದೇಶಗಳಲ್ಲಿ ಬೆಲೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಖಾಪ್ ಪಂಚಾಯತ್ ನಾಯಕರು, ನಾವು ಹಾಲನ್ನು 100 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದ್ದೇವೆ. ಡೈರಿಗೆ ರೈತರು 100 ರೂ. ದರದಲ್ಲಿ ಹಾಲು ಕೊಡುತ್ತಾರೆ. ಸರ್ಕಾರಿ ಸಹಕಾರ ಸಂಘಗಳಿಗೆ 100 ರೂಪಾಯಿಗೆ ಹಾಲು ಮಾರಾಟ ಮಾಡುವಂತೆ ರೈತರಿಗೆ ಮನವಿ ಮಾಡಿದ್ದೇವೆ ಎಂದು ಘೋಷಿಸಿದ್ದಾರೆ.
ಎಲ್ಲ ಸರ್ಕಾರಿ ಸಹಕಾರ ಸಂಘಗಳಿಗೆ ಒಂದು ಲೀಟರ್ ಹಾಲಿಗೆ 100 ರೂ.ಗೆ ಮಾರಾಟ ಮಾಡುವಂತೆ ಹಾಲು ಉತ್ಪಾದಕರಿಗೆ ಮನವಿ ಮಾಡಿರುವುದಾಗಿ ಖಾಪ್ ಪಂಚಾಯಿತಿ ನಾಯಕರು ತಿಳಿಸಿದ್ದಾರೆ.