ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ.
ಇದರ ಮಧ್ಯೆ ಎಬಿಪಿ ನ್ಯೂಸ್ ಸಿ-ವೋಟರ್ ಮಾಡಿರುವ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಪಶ್ಚಿಮಬಂಗಾಳದಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿಗೆ ದೊಡ್ಡ ಶಾಕ್ ನೀಡಿದೆ. ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿದರೂ ಸಹ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಇನ್ನು ಕೇರಳದಲ್ಲೂ ಸಹ ಪಿಣರಾಯಿ ವಿಜಯನ್ ಅವರ ಸರ್ಕಾರ ಎರಡನೇ ಅವಧಿಗೂ ಮುಂದುವರಿಯಲಿದೆ ಎಂದು ಸಮೀಕ್ಷೆ ತಿಳಿಸಿದ್ದು, ತಮಿಳುನಾಡಿನಲ್ಲಿ ಡಿಎಂಕೆ – ಕಾಂಗ್ರೆಸ್ ಮೈತ್ರಿಕೂಟ ಕ್ಲೀನ್ ಸ್ವೀಪ್ ನೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ತಿಳಿಸಲಾಗಿದೆ. ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟ ಈ ಬಾರಿ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆ ತಿಳಿಸಿದ್ದು, ಅಸ್ಸಾಂನಲ್ಲಿಯೂ ಸಹ ಬಿಜೆಪಿ ಎರಡನೇ ಅವಧಿಗೆ ಸರ್ಕಾರ ರಚಿಸಲಿದೆ ಎಂದು ಹೇಳಲಾಗಿದೆ.