ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಒಳ ಒಪ್ಪಂದ ಅಮಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ತನ್ವೀರ್ ಅಮಾನತ್ತಿಗೆ ಸಿದ್ದರಾಮಯ್ಯ ಬಣ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಸಿಡಿದೆದ್ದಿರುವ ತನ್ವೀರ್ ಸೇಠ್, ಅಮಾನತು ಮಾಡುವುದಾದರೆ ಮಾಡಲಿ, ಆದರೆ ನನ್ನ ವಿರುದ್ಧ ಕ್ರಮ ಕೈಗೊಂಡರೆ ಪರಿಣಾಮ ಎದುರಿಸಲು ಸಿದ್ಧರಾಗಲಿ ಎಂದು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತನ್ವೀರ್ ಸೇಠ್, ನನಗೂ ನನ್ನದೇ ಗೌರವ ಇದೆ. ಮೈತ್ರಿ ಆಗಬಾರದು ಎಂದು ಡೀಲ್ ಆಗಿದ್ರೆ ತನಿಖೆಯಾಗಲಿ. ನಾನು ಯಾವುದಕ್ಕೂ ಹೆದರುವ ವ್ಯಕ್ತಿಯಲ್ಲ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆ ಅಲ್ಲ. ಅಮಾನತು ಮಾಡಿದರೂ ಅದಕ್ಕೂ ಸಿದ್ಧ ಎಂದರು.
ಪಕ್ಷದಲ್ಲಿ ನಾಯಕರಿಗೆ ಹಿಂಬಾಲಕರಿದ್ದಾರೆ ಎಂದಾದರೆ ನನ್ನ ಹಿಂದೆ ಕತ್ತೆಗಳಿದ್ದಾರಾ…? ನನಗೂ ಹಿಂಬಾಲಕರಿದ್ದಾರೆ. ಆದರೆ ನಾನು ಯಾರನ್ನೂ ಪ್ರತಿಭಟನೆ ಮಾಡಿ ಎಂದು ಕರೆದಿಲ್ಲ. ಮೈತ್ರಿ ಮಾಡಿಕೊಳ್ಳಲು ಹೇಳಿದ್ದೇ ಸಿದ್ದರಾಮಯ್ಯ. ಆದರೆ ಗಂಡು ಮಗುವಾಗಿಲ್ಲ, ಹೆಣ್ಣು ಮಗುವಾಗಿದೆ. ಹೆಣ್ಣು ಮಗು ಬೇಡ ಅಂದರೆ ಅದಕ್ಕೆ ನಾನು ಒಪ್ಪಲ್ಲ, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ವರದಿ ನೀಡುತ್ತೇನೆ ಎಂದರು.